top of page

ಇಂಡೋ-ಪಾಕ್ ಕದನದಲ್ಲಿ 3ನೇ ವ್ಯಕ್ತಿ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದು ದುರಾದೃಷ್ಟಕರ, ಇನ್ನು ಮುಂದೆ ಮೋದಿ ವಿಶ್ವಗುರು ಅಲ್ಲ: ಬಿಕೆ. ಹರಿಪ್ರಸಾದ್ ವಾಗ್ದಾಳಿ

  • Writer: new waves technology
    new waves technology
  • May 13
  • 2 min read

ಮೋದಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದು ದುರದೃಷ್ಟಕರ ಸಂಗತಿ. ನಾವು ಈ ಮೊದಲು ಶಿಮ್ಲಾ ಒಪ್ಪಂದ ಮಾಡಿಕೊಂಡಿದ್ದೆವು, ಇದು ಬೇರೆ ದೇಶಗಳು ತಲೆಹಾಕದಂತೆ ಮಾಡಿಕೊಂಡ ಒಪ್ಪಂದವಾಗಿತ್ತು. ಇದೆಲ್ಲವನ್ನು ಗಾಳಿಗೆ ತೂರಿದ್ದಾರೆ.

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡಿದ್ದು ದುರಾದೃಷ್ಟಕರ ಸಂಗತಿ ಎಂದು ಕಾಂಗ್ರೆಸ್ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಸೋಮವಾರ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮೆರಿಕಾ ಮಧ್ಯಸ್ಥಿಕೆ ವಹಿಸಿದೆ ಎಂದು ಟ್ರಂಪ್ ಹೇಳಿಕೊಂಡ ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕದನ ವಿರಾಮ ಘೋಷಿಸಿದ್ದು ಕಾರ್ಯತಂತ್ರದಲ್ಲಾಗಿರುವ ಪ್ರಮಾದ ಎಂದು ಕರೆಯಬಹುದು. ಮೋದಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದು ದುರದೃಷ್ಟಕರ ಸಂಗತಿ. ನಾವು ಈ ಮೊದಲು ಶಿಮ್ಲಾ ಒಪ್ಪಂದ ಮಾಡಿಕೊಂಡಿದ್ದೆವು, ಇದು ಬೇರೆ ದೇಶಗಳು ತಲೆಹಾಕದಂತೆ ಮಾಡಿಕೊಂಡ ಒಪ್ಪಂದವಾಗಿತ್ತು. ಇದೆಲ್ಲವನ್ನು ಗಾಳಿಗೆ ತೂರಿದ್ದಾರೆ. ನಮ್ಮ ಸೈನ್ಯ ದಿಟ್ಟತನದಿಂದ ಹೋರಾಡುತ್ತಿದೆ. ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ನಮ್ಮ‌ ಮೋದಿಯವರ ಆತ್ಮೀಯ ಸ್ಮೇಹಿತರು. ಮೊದಲು ಕದನ ವಿರಾಮದ ಬಗ್ಗೆ ಟ್ರಂಪ್ ಹೇಳುತ್ತಾರೆ. ಆನಂತರ ನಮ್ಮ ಸೇನೆ ಹೇಳುತ್ತೆ. ಅಮೆರಿಕ ನಮ್ಮ ಸೈನ್ಯಕ್ಕೆ ಹೇಳುವಂತಾಗಿದೆ ಎಂದು ಟೀಕಿಸಿದರು.

ಭಾರತೀಯ ಸೇನೆ ರಾಷ್ಟ್ರದ ರಕ್ಷಣೆ, ಜೀವ ರಕ್ಷಣೆ ಮಾಡಿದ್ದಾರೆ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವೆ. ಅವರ ಕುಟುಂಬಕ್ಕೂ ಭಗವಂತ ಶಕ್ತಿ ಕೊಡಲಿ. ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕ್​ಗೆ ಬುದ್ಧಿ ಕಲಿಸಿ‌. ನಿಮ್ಮ ಎಲ್ಲ ನಿರ್ಧಾರಕ್ಕೆ ಬೆಂಬಲಿಸುತ್ತೇವೆ ಅಂದಿದ್ದೆವು. ವರ್ಕಿಂಗ್ ಕಮಿಟಿ ಸಭೆಯಲ್ಲೂ ಹೇಳಿದ್ದೆವು. ಸಂಸತ್ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಒತ್ತಾಯಿಸಿದ್ರು. ಯುದ್ಧ ಘೋಷಣೆ ಮುನ್ನ ಸರ್ವ ಪಕ್ಷ ಸಭೆ ಕರೆದರು. ಆ ಸಭೆಗೂ ಪ್ರಧಾನಿ ಮೋದಿ ಗೈರಾದರು. ಪಹಲ್ಗಾಮ್ ಆದ ನಂತರ ಬಿಹಾರಕ್ಕೆ ಹೋದರು. ಚುನಾವಣೆ ಭಾಷಣ ಮಾಡಿದರು. ಕೇರಳದ ಕಾರ್ಯಕ್ರಮಕ್ಕೆ ಹೋದರು. ಬಾಲಿವುಡ್ ಕಾರ್ಯಕ್ರಮಕ್ಕೂ‌ ಹೋದರು.‌ ಇದೆಲ್ಲ ನೋಡಿದರೆ ಅವರ ಗಂಭೀರತೆ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಮೂರನೇ ರಾಷ್ಟ್ರ ಇಲ್ಲಿ ತಲೆಹಾಕಿದೆ. ನಾವು ಸಂಪೂರ್ಣ ಶರಣಾಗಿದ್ದೇವೆ. ಬಿಜೆಪಿಯವರು ಶಿಮ್ಲಾ ಒಪ್ಪಂದ ಒಪ್ಪಿಕೊಂಡಿದ್ದಾರಾ ಇಲ್ವಾ?. ವಿಶ್ವಗುರು ಅಂತ ಮೋದಿ ಕರೆಸಿಕೊಳ್ಳುತ್ತಿದ್ದರು. ಈಗ ಟ್ರಂಪ್ ನಾನೇ ವಿಶ್ವಗುರು ಅಂತ ಕರೆಸಿಕೊಂಡಿದ್ದಾರೆ. ನಾವು ಟ್ರಂಪ್ ಹೇಳಿದಂತೆ ಕೇಳಬೇಕಾಗಿದೆ. ಟೆಸ್ಲಾದವರು ಬರಬೇಕಾ ಬೇಡ್ವಾ ಅವರು ಹೇಳಬೇಕಾ?. ಭಾರತ ಯುದ್ಧ ಮಾಡಬೇಕಾ ಬೇಡ್ವಾ ಇಂದು ಟ್ರಂಪ್ ಹೇಳುವಂತಾಗಿದೆ. ನಮ್ಮ ಸೈನ್ಯಕ್ಕೆ ಇದಕ್ಕಿಂತ ಅಪಮಾನ ಇನ್ನೊಂದಿಲ್ಲ ಎಂದು ಹೇಳಿದರು.

ಇಂಡಿಯಾ ವಿಚಾರದಲ್ಲಿ ತಲೆ ತೂರಿಸುವಂತಿಲ್ಲ. ಯಾವುದೇ ರಾಷ್ಟ್ರಗಳು ತಲೆ ತೂರಿಸುವಂತಿಲ್ಲ. ಇದನ್ನ ನಮ್ಮ ಸರ್ಕಾರ ತಿಳಿದುಕೊಂಡಿಲ್ವಾ?. ಇಂದಿರಾಗಾಂಧಿ 1971ರಲ್ಲಿ ಏನು‌ ಮಾಡಿದ್ದರು. ಬಾಂಗ್ಲಾ ಯುದ್ಧದ ವೇಳೆ ಏನು‌ ಮಾಡಿದ್ದರು?. ಅಮೆರಿಕ ಅಧ್ಯಕ್ಷ ನಿಕ್ಸನ್ ತಲೆ ತೂರಿಸಿದ್ದರು. ಅದಕ್ಕೆ‌ ವಿರುದ್ಧವಾಗಿ ಇಂದಿರಾಗಾಂಧಿ ನಿಂತರು. ಪಾಕ್ ವಿರುದ್ಧ ಯುದ್ಧ ಮಾಡಿ ಗೆದ್ದು ತೋರಿಸಲಿಲ್ಲವೇ?‌. ಪಾಕ್​ಗೆ ಬುದ್ಧಿ ಕಲಿಸಬೇಕು ಎಂದು ಜನ ಬಯಸಿದ್ದರು. ಸಂಪೂರ್ಣ ಸಹಕಾರವನ್ನ ಕೊಟ್ಟಿದ್ದರು. ಆದರೆ ಇವರು ಮಾಡಿದ್ದೇನು?. ಮೂರನೆಯವರು ಇಲ್ಲಿ‌ ಮಧ್ಯಸ್ಥಿಕೆ ವಹಿಸಬೇಕಿರಲಿಲ್ಲ. ಪಾಕ್​ಗೆ ಬುದ್ಧಿ ಕಲಿಸುವ ಅವಕಾಶ ನಮಗಿತ್ತು. ಕೇಂದ್ರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು‌. ಸರ್ಕಾರ ಕ್ರಮವನ್ನು ತೆಗೆದುಕೊಳ್ಳಬೇಕಿತ್ತು. ಯಾಕೆ ತೆಗೆದುಕೊಳ್ಳಲಿಲ್ಲ. ಯಾರು ತಡೆದರು ಅವರೇ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments


bottom of page