top of page

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮ ಆರೋಪ: ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ನೇಮಕ

  • Writer: new waves technology
    new waves technology
  • Nov 12, 2024
  • 1 min read

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಈಗಾಗಲೇ ಸಲ್ಲಿಕೆಯಾದ ವರದಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.












ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರಾದ ಡಿ. ಚಂದ್ರಶೇಖರಯ್ಯ ಅವರು ಹೊರಡಿಸಿದ ಆದೇಶದಲ್ಲಿ ಈ ಅಕ್ರಮಗಳ ತನಿಖೆಗೆ ತನಿಖಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರನ್ನು ನೇಮಿಸಲಾಗಿದೆ. ಆರು ತಿಂಗಳ ಒಳಗಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸದರಿ ಆಕ್ರಮಗಳ ಕುರಿತು ಹಿಂದಿನ ಎಸಿಎಸ್ ಡಾ.ಇ.ವಿ.ರಮಣರೆಡ್ಡಿ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಹೆಚ್ಚಿನ ವಿಚಾರಣೆ ಮತ್ತು ತನಿಖೆ ನಡೆಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರಿಗೆ ಸೋಮವಾರ ಹೊರಡಿಸಲಾದ ಆದೇಶದಲ್ಲಿ ತಿಳಿಸಿದೆ.

2020-21 ರಿಂದ 2022-23ರ ಅವಧಿಯಲ್ಲಿ ಕೆಕೆಆರ್ ಡಿಬಿ ಮಂಡಳಿಗೆ ಬಿಡುಗಡೆಯಾದ ಅನುದಾನದ ಹಣ ವಿನಿಯೋಗದ ಕುರಿತು ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಆಗಿರುವ 300 ಕೋಟಿ ರೂ.ಅಕ್ರಮ ವೆಚ್ಚ ಸೇರಿದಂತೆ ಇತರ ಅಕ್ರಮಗಳು ನಡೆದಿರುವುದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಕಾಂಗ್ರೆಸ್ ಸರಕಾರದ ಈ ಆದೇಶದಿಂದಾಗಿ ಕಳೆದ ಬಾರಿಯ ಬಿಜೆಪಿ ಅವಧಿಯ ಸರಕಾರದಲ್ಲಿ ಕೆಕೆಆರ್'ಡಿಬಿಯ ಅಧ್ಯಕ್ಷರಾಗಿದ್ದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿದ್ದ ಬಿಜೆಪಿಯ ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ ಅವರಿಗೆ ಸಂಕಷ್ಟ ಎದುರಾಗಿದೆ.

Comentarios


bottom of page