top of page

ಕೇಂದ್ರ ಬಜೆಟ್‌ನಲ್ಲಿ 11,495 ಕೋಟಿ ರೂ. ವಿಶೇಷ ಅನುದಾನ ಕೇಳಿದ ಕರ್ನಾಟಕ

  • Writer: new waves technology
    new waves technology
  • Jan 31
  • 1 min read

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2025-26ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.

ಬೆಂಗಳೂರು: ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ, ಮೇಕೆದಾಟು ಯೋಜನೆಗೆ ಅನುಮೋದನೆ ಮತ್ತು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಅನುದಾನದ 11,495 ಕೋಟಿ ರೂ. ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಕರ್ನಾಟಕ ಸರ್ಕಾರ ಕೇಂದ್ರದೊಂದಿಗೆ ನಡೆದ ಬಜೆಟ್ ಪೂರ್ವ ಸಮಾಲೋಚನೆಯ ಸಭೆಯಲ್ಲಿ ಮುಂದಿಟ್ಚಿದೆ.

ಕಳೆದ ತಿಂಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಂಡಿಸಲಿರುವ 2025-26ನೇ ಸಾಲಿನ ಕೇಂದ್ರ ಬಜೆಟ್‌ಗಾಗಿ ಬೇಡಿಕೆಗಳು ಮತ್ತು ಸಲಹೆಗಳನ್ನು ಪಡೆದುಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ(ಯುಟಿ) ಹಣಕಾಸು ಸಚಿವರ ಸಭೆ ನಡೆಸಿದ್ದರು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬರಪೀಡಿತ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸಲು ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಭರವಸೆ ನೀಡಿದ್ದ 5,300 ಕೋಟಿ ರೂ.ಗಳನ್ನು ಮತ್ತು ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ವಿಶೇಷ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.


ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನಕ್ಕಾಗಿ "ಮರುಪಾವತಿ ಆಧಾರಿತ" ವ್ಯವಸ್ಥೆಯಿಂದ "ಮುಂಗಡ-ಬಿಡುಗಡೆ" ಮಾದರಿಗೆ ಬದಲಾಯಿಸುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು ಮತ್ತು ಆಶಾ ಕಾರ್ಯಕರ್ತರಿಗೆ ಅವರ ಗೌರವಧನದ ಕೇಂದ್ರ ಪಾಲನ್ನು ತಿಂಗಳಿಗೆ 5,000 ರೂ. ಮತ್ತು ಅಂಗನವಾಡಿ ಸಹಾಯಕಿಯರ ಗೌರವಧನವನ್ನು 2,000 ರೂ.ಗೆ ಹೆಚ್ಚಿಸುವಂತೆ ಮನವಿ ಮಾಡಿದರು.

ಕೃಷ್ಣ ಬೈರೇಗೌಡ ಅವರ ಕಚೇರಿ ಶುಕ್ರವಾರ ಹಂಚಿಕೊಂಡ ಪ್ರಕಟಣೆಯ ಪ್ರಕಾರ, ನಗರದ ಮನೆಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಹಾಯಧನವನ್ನು 1.5 ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಮತ್ತು ಗ್ರಾಮೀಣ ಮನೆಗಳಿಗೆ 72,000 ರೂ.ಗಳಿಂದ ಮೂರು ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಕೋರಿದ್ದಾರೆ.

ಹೊಸ ರಿಂಗ್ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನವೀಕರಣ ಸೇರಿದಂತೆ ರಸ್ತೆ ಮೂಲಸೌಕರ್ಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಿದೆ.

Comentários


bottom of page