ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್ ಸೇರಿ ಹಲವರ ಪೈಪೋಟಿ! ಯಾರೀಕೆ? ಇಲ್ಲಿದೆ ಮಾಹಿತಿ
- new waves technology
- Jan 8
- 1 min read
ಮಾರ್ಚ್ 24ರಂದು ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ.

ಒಟ್ಟಾವ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರೂಡೊ ಅವರ ಸ್ಥಾನಕ್ಕೆ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿತಾ ಆನಂದ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಸೋಮವಾರ ಪ್ರಧಾನಿ ಹುದ್ದೆಗೆ ಟ್ರೂಡೊ ರಾಜೀನಾಮೆ ನೀಡಿರುವುದರಿಂದ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ.
ಬರೋಬ್ಬರಿ ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಟ್ರುಡೋ ರಾಜೀನಾಮೆಗೆ ಒತ್ತಾಯಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ. ಆದರೆ ಲಿಬರಲ್ ಪಕ್ಷ ನೂತನ ಪ್ರಧಾನಿ ಆಯ್ಕೆ ಮಾಡುವವರೆಗೆ ತಾನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಮುಂದಿನ ಪ್ರಧಾನಿ ಯಾರು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಮಾರ್ಚ್ 24ರಂದು ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಸಾರಿಗೆ ಮತ್ತು ಆಂತರಿಕ ವ್ಯವಹಾರಗಳ ಖಾತೆ ಸಚಿವರಾಗಿರುವ ಅನಿತಾ ಆನಂದ್, ಜೊತೆಗೆ, ಡೊಮಿನಿಕ್ ಲೆಬ್ಲಾಂಕ್, ಕ್ರಿಸ್ಟಿನಾ ಫ್ರೀಲ್ಯಾಂಡ್, ಮೆಲೈನ್ ಜೋಲಿ, ಫ್ರಾಂಕೋಯಿಸ್ ಫಿಲಿಪ್ ಚಾಂಪೇನ್ ಮತ್ತು ಮಾಕ್ ಕೆರ್ನಿ ಹೆಸರು ಕೂಡಾ ಚಾಲ್ತಿಯಲ್ಲಿದೆ.
2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.
1960ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಗೆ ವಲಸೆ ಬಂದ ಸರೋಜ್ ಡಿ ರಾಮ್ ಮತ್ತು ಎಸ್.ವಿ.ಆನಂದ್ ಎಂಬ ವೈದ್ಯ ದಂಪತಿಯ ಪುತ್ರಿಯಾಗಿ 1967ರ ಮೇ 20ರಂದು ಜನಿಸಿದ ಅನಿತಾ, ವಿದ್ಯಾರ್ಥಿ ಜೀವನದಿಂದಲೂ ತಮ್ಮ ಪೋಷಕರಿಂದ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು ಮತ್ತು ವೃತ್ತಿಸಂಹಿತೆಯನ್ನು ಅಳವಡಿಸಿಕೊಂಡಿದ್ದರು.
57 ವರ್ಷದ ಅನಿತಾ ಆನಂದ್ ಆಕ್ಸ್ ಫರ್ಡ್ ಯೂನಿರ್ವಸಿಟಿ ಪದವೀಧರೆಯಾಗಿದ್ದಾರೆ. ಅನಿತಾ ಅವರು ಓಕ್ ವಿಲ್ಲೆಯ ಸಂಸದೆಯಾಗಿದ್ದರು. ನೋವಾ ಸ್ಕೋಟಿಯಾದಲ್ಲಿ ಜನಿಸಿದ್ದ ಅನಿತಾ ಆನಂದ್, 1985ರಲ್ಲಿ ಓನ್ ಟಾರಿಯೋಕ್ಕೆ ಸ್ಥಳಾಂತರಗೊಂಡಿದ್ದರು. ಅನಿತಾ ಮತ್ತು ಪತಿ ಜಾನ್ ಹಾಗೂ ನಾಲ್ವರು ಮಕ್ಕಳೊಂದಿಗೆ ಓಕ್ ವಿಲ್ಲೆಯಲ್ಲಿ ವಾಸವಾಗಿರುವುದಾಗಿ ವರದಿ ತಿಳಿಸಿದೆ.
18ನೇ ವಯಸ್ಸಿನಲ್ಲಿ ಅಂದರೆ 1985ನಲ್ಲಿ ಒಂಟಾರಿಯೊಗೆ ಸ್ಥಳಾಂತರಗೊಂಡು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ಬಳಿಕ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್) ಪದವಿಯನ್ನು ಆಕ್ಸ್ಫರ್ಡ್ ವಿವಿಯಿಂದ ಪಡೆದರು. ಡಾಲ್ ಹೌಸಿ ವಿವಿ ಮತ್ತು ಟೊರಾಂಟೊ ವಿವಿಯಿಂದ ಕಾನೂನು ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ ಮತ್ತು ಮಾಸ್ಟರ್ಸ್ ಡಿಗ್ರಿ ಪಡೆದರು. ಯೆಲೆ ಲಾ ಸ್ಕೂಲ್ ಸೇರಿದಂತೆ ವಿವಿಧೆಡೆ ಅಧ್ಯಾಪನಾ ವೃತ್ತಿ ಕೈಗೊಂಡರು.
Comments