top of page

ಕಾನೂನು ಯಾರನ್ನೂ ಭಯಪಡಿಸುವುದಿಲ್ಲ : ನ್ಯಾ ಮಹಾವೀರ ಕರಣ್ಣವರ

  • Writer: new waves technology
    new waves technology
  • Oct 28, 2024
  • 1 min read

ದಾವಣಗೆರೆ :ಕಾನೂನು ಇರುವುದು ಯಾರನ್ನೂ ಭಯಪಡಿಸಲು ಅಲ್ಲ, ಬದಲಿಗೆ ನೊಂದವರಿಗೆ ನ್ಯಾಯ ಕೊಡಿಸುವ ಮೂಲ ಉದ್ದೇಶವನ್ನು ಕಾನೂನು ಹೊಂದಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣವರ ಹೇಳಿದರು.









ಶನಿವಾರ ನಗರದ ರೋಟರಿ ಬಾಲಭವನದಲ್ಲಿ ವಾಲ್ಮೀಕಿ ಪ್ರತಿಷ್ಠಾನ. ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿಗಳ ಆಶ್ರಯದಲ್ಲಿ 3 ನೇ ವರ್ಷದ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಜನ ಸಾಮಾನ್ಯರಿಗೆ ಕಾನೂನು ಸೇವೆಗಳ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನ್ಯಾಯವಾದಾಗ ನನಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎನ್ನುವ ಭಯ ಬಿಟ್ಟು, ಮೊದಲು ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಉಚಿತ ಕಾನೂನು ನೆರವು ದೊರೆಯಲಿದೆ. ಹಾಗಾಗಿ ಕಾನೂನು ಈ ದೇಶದ ಜನರ ನೆರವಿಗೆ ಇದೇಯೇ ಹೊರತು ಭಯಪಡಿಸಲು ಅಲ್ಲ ಎಂದು ಹೇಳಿದರು.

ಪ್ರತಿಯೊಬ್ಬರೂ ಕಾನೂನಿನ ತಿಳುವಳಿಕೆ ಹೊಂದಿದಾಗ ಮಾತ್ರ ಅನ್ಯಾಯ ಪ್ರಶ್ನಿಸುವ ಗುಣ ಬರುತ್ತದೆ.ಆಗ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಭಾರತದ ಸಂವಿಧಾನ ರಚನೆಗೆ ರಾಮಾಯಣ, ಮಹಾಭಾರತದಂಥಹ ಮಹಾಕಾವ್ಯಗಳು ಮೂಲ ಪ್ರೇರಣೆಯಾಗಿವೆ. ಈ ಮಹಾಕಾವ್ಯಗಳಲ್ಲಿ ಬರುವ ನಮ್ಮ ಕೌಟುಂಬಿಕ ವ್ಯವಸ್ಥೆ, ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸಾಮಾಜಿಕ ಮೌಲ್ಯಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಹಾಗಾಗಿ ರಾಮಾಯಣವನ್ನು ಭಾರತೀಯ ಸಂಸ್ಕೃತಿಯ ಮೊದಲ ಸಂವಿಧಾನ ಎಂದರೆ ತಪ್ಪಾಗಲಾರದು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿ, ಮನುಷ್ಯನಿಗೆ ಜೀವಿಸಲು ಹೇಗೆ ಆಹಾರ ಅಗತ್ಯವೋ ಸಮಾಜದಲ್ಲಿ ಬದುಕಲು ಕಾನೂನು ತಿಳುವಳಿಕೆ ಕೂಡ ಅಷ್ಟೆ ಮುಖ್ಯ, ದೌರ್ಜನ್ಯ, ಅನ್ಯಾಯವಾದಾಗ ಪ್ರಶ್ನಿಸುವ ಗುಣವನ್ನು ಸಂವಿಧಾನ ನಮಗೆ ನೀಡಿದೆ. ಈ ರೀತಿಯ ಸಂವಿಧಾನ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದರು. ಈ ರೀತಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾನೂನು ತಿಳುವಳಿಕೆ ಪಡೆದು ಸಮಾಜದಲ್ಲಿ ತಮ್ಮ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯವನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ಅವರು. ಮಕ್ಕಳಿಗಾಗಿ ಮಕ್ಕಳ ಹಕ್ಕುಗಳಿವೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಮೊದಲಾದ ಕಾನೂನುಗಳ ಅರಿವು ಪಡೆಯಬೇಕು ಮತ್ತು ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಕಾನೂನು ಕುರಿತು ಹೆಚ್ಚು ತಿಳುವಳಿಕೆ ಹೊಂದಬೇಕೆಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಬಿ.ಎಂ.ಹನುಮಂತಪ್ಪ ಮಾತನಾಡಿ, ಮಕ್ಕಳು ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಮಿತಿಯ ಮುಖಂಡ ಕರಿಯಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಣ್ಣಾಪುರದ ಹೇಮಣ್ಣ, ಹಿರಿಯ ವಕೀಲ ಆಂಜನೇಯ ಗುರೂಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಸಮಿತಿ ಸದಸ್ಯೆ ನಳಿನಮ್ಮ, ರಾಮಚಂದ್ರಪ್ಪ, ಅಂತರಾಷ್ಟ್ರೀಯ ಈಜುಪಟು ರೇವತಿ ನಾಯಕ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸೀತಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

留言


bottom of page