top of page

ಚಾರಣ ತಂದ ಆಪತ್ತು: ಜ್ವಾಲಮುಖಿ ನೋಡಲು ಹೋಗಿದ್ದ Brazilian ಮಹಿಳಾ ಟ್ರೆಕ್ಕರ್ ಶವವಾಗಿ ಪತ್ತೆ!

  • Writer: new waves technology
    new waves technology
  • Jun 25
  • 1 min read

ಇಂಡೋನೇಷ್ಯಾದ ಮೌಂಟ್ ರಿಂಜಾನಿಯಲ್ಲಿ ಚಾರಣ ಮಾಡುವಾಗ ಬ್ರೆಜಿಲ್ ಮೂಲದ ಮಹಿಳಾ ಟ್ರೆಕ್ಕರ್ ಜೂಲಿಯಾನ ಮರಿನ್ಸ್ (juliana-marins) ದುರಂತ ಸಾವಿಗೀಡಾಗಿದ್ದಾರೆ.

ಜಕಾರ್ತ: ಇಂಡೋನೇಷ್ಯಾದ ಸಕ್ರಿಯ ಜ್ವಾಲಾಮುಖಿಯ ಮೇಲೆ ಚಾರಣ ಮಾಡಲು ಹೋಗಿದ್ದ ಬ್ರೆಜಿಲಿಯನ್ ಮಹಿಳಾ ಟ್ರೆಕ್ಕರ್ ದುರಂತ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂಡೋನೇಷ್ಯಾದ ಮೌಂಟ್ ರಿಂಜಾನಿಯಲ್ಲಿ ಚಾರಣ ಮಾಡುವಾಗ ಬ್ರೆಜಿಲ್ ಮೂಲದ ಮಹಿಳಾ ಟ್ರೆಕ್ಕರ್ ಜೂಲಿಯಾನ ಮರಿನ್ಸ್ (juliana-marins) ದುರಂತ ಸಾವಿಗೀಡಾಗಿದ್ದಾರೆ. ಟ್ರೆಕ್ಕಿಂಗ್ ವೇಳೆ ಜೂಲಿಯಾನ ಮರಿನ್ಸ್ ಎತ್ತರದ ಬಂಡೆಗಲ್ಲಿನಿಂದ ಕಾಲು ಜಾರಿ ಬಿದ್ದಿದ್ದರು.

4 ದಿನಗಳಾದರೂ ಜೂಲಿಯಾನ ಮರಿನ್ಸ್ ಪತ್ತೆಯಾಗಿರಲಿಲ್ಲ. ಇದೀಗ ಅಧಿಕಾರಿಗಳು ಶೋಧ ನಡೆಸಿ ಜೂಲಿಯಾನ ಮರಿನ್ಸ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

ಇಂಡೋನೇಷ್ಯಾದ ಅಧಿಕಾರಿಗಳ ಪ್ರಕಾರ, 26 ವರ್ಷದ ಟ್ರಾವೆಲ್ ವ್ಲಾಗರ್ ಜೂಲಿಯಾನ ಮರಿನ್ಸ್ ಶನಿವಾರ ಬೆಳಿಗ್ಗೆ ಸ್ನೇಹಿತರ ಗುಂಪಿನೊಂದಿಗೆ ಮೌಂಟ್ ರಿಂಜಾನಿಯಲ್ಲಿ ಚಾರಣ ಮಾಡುತ್ತಿದ್ದರು. ಈ ವೇಳೆ ಎತ್ತರದ ಬಂಡೆಯ ತುದಿಯಲ್ಲಿ ಕಾಲು ಜಾರಿ ಬಿದ್ದಿದ್ದರು.

ಈ ವೇಳೆ ಜೂಲಿಯಾನ ಮರಿನ್ಸ್ ಸುಮಾರು 490 ಅಡಿ ಕೆಳಗೆ ಬಿದ್ದಿದ್ದಾರೆ. ಈಕೆಯೊಂದಿಗೆ ಚಾರಣಕ್ಕೆ ಬಂದಿದ್ದ ಸ್ನೇಹಿತರು ಈಕೆ ಬಿದ್ದಿದ್ದ ಸ್ಥಳದಲ್ಲಿ ಶೋಧ ನಡೆಸಿದರಾದರೂ ಆಕೆ ಪತ್ತೆಯಾಗಿರಲಿಲ್ಲ. ಕೊನೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ಆಕೆಯ ಶವ 4 ದಿನಗಳ ಬಳಿಕ ಪತ್ತೆಯಾಗಿದೆ.

ಜೂಲಿಯಾನಾ ಮರಿನ್ಸ್ ಶಿಖರಕ್ಕೆ ಪ್ರಯಾಣಿಸುತ್ತಿದ್ದಾಗ ಸ್ಥಳೀಯ ಸಮಯ ಬೆಳಿಗ್ಗೆ 6:30 ರ ಸುಮಾರಿಗೆ ಈ ದುರಂತ ಕುಸಿತ ಸಂಭವಿಸಿತ್ತು. ಜಾರಿ ಬಿದ್ದ ಕೆಲ ಗಂಟೆಗಳ ವರೆಗೂ ಜೂಲಿಯಾನಾ ಮರಿನ್ಸ್ ಸಹಾಯಕ್ಕಾಗಿ ಕಿರುಚಾಡಿದ್ದಳು. ಹೀಗಾಗಿ ಆಕೆ ಜೀವಂತವಾಗಿದ್ದಾರೆ ಎಂದು ಶಂಕಿಸಲಾಗಿತ್ತು.

ಆದರೆ ಜ್ವಾಲಾಮುಖಿ ಪ್ರದೇಶದಲ್ಲಿದ್ದ ದಟ್ಟವಾದ ಮಂಜು ಮತ್ತು ಕಡಿದಾದ ಇಳಿಜಾರಿನಿಂದಾಗಿ ರಕ್ಷಣಾ ತಂಡಗಳು ಆಕೆಯನ್ನು ತಲುಪಲು ಸಾಧ್ಯವಾಗಿರಲಿಲ್ಲ. ಮರಳಿನಲ್ಲಿ ಸಿಲುಕಿದ್ದ ಆಕೆಯನ್ನು ಹೊರಗೆಳೆಯುವುದೇ ಸಾಹಸವಾಗಿತ್ತು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಇಂಡೋನೇಷ್ಯಾದ ಲೊಂಬೋಕ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ 12,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ ಮತ್ತು ಆಗ್ನೇಯ ಏಷ್ಯಾದ ದ್ವೀಪಸಮೂಹದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 12,224 ಅಡಿ ಎತ್ತರದಲ್ಲಿ, ಮೌಂಟ್ ರಿಂಜಾನಿ ಇಂಡೋನೇಷ್ಯಾದ ಎರಡನೇ ಅತಿ ಎತ್ತರದ ಜ್ವಾಲಾಮುಖಿಯಾಗಿದೆ.

ಕಳೆದ ತಿಂಗಳು ಮಲೇಷಿಯಾದ ಸಂದರ್ಶಕ ಸೇರಿದಂತೆ ಹಲವಾರು ಜನರು ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಚಾರಣ ಮಾಡುವಾಗ ಪ್ರಾಣ ಕಳೆದುಕೊಂಡಿದ್ದರು. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು 3,726 ಮೀಟರ್ ಎತ್ತರದ ಈ ಜ್ವಾಲಾಮುಖಿಗೆ ಭೇಟಿ ನೀಡುತ್ತಾರೆ.

Comentários


bottom of page