ದೇಶಸ್ವಾತಂತ್ರ್ಯ ಹೋರಾಟಗಾರರ ಅಪಹಾಸ್ಯ ಬೇಡ: ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ 'ಸುಪ್ರೀಂ' ಛೀಮಾರಿ; ಕ್ರಿಮಿನಲ್ ಪ್ರಕರಣಕ್ಕೆ ತಡೆ
- new waves technology
- Apr 25
- 1 min read
ಮಹಾತ್ಮ ಗಾಂಧಿ ಕೂಡ ಬ್ರಿಟಿಷರೊಂದಿಗಿನ ಪತ್ರ ಸಂವಹನದಲ್ಲಿ "ನಿಮ್ಮ ನಿಷ್ಠಾವಂತ ಸೇವಕ" ಎಂಬ ಪದ ಬಳಸಿರುವ ಬಗ್ಗೆ ರಾಹುಲ್ ಗಾಂಧಿಗೆ ತಿಳಿದಿದೆಯೇ ಎಂದು ಪೀಠ ರಾಹುಲ್ ಪರ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು ಪ್ರಶ್ನಿಸಿತು.

ನವದೆಹಲಿ: ವಿನಾಯಕ ದಾಮೋದರ್ ಸಾವರ್ಕರ್ ಅವರ ಬಗ್ಗೆ "ಬೇಜವಾಬ್ದಾರಿಯುತ" ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಬೇಡಿ" ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ರಾಹುಲ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠವು ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದೆ.
ಏಕೆಂದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಅಂತಹ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸುವ ಸಾಧೆತೆಯಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರನ್ನು, ಮಹಾತ್ಮ ಗಾಂಧಿ ಕೂಡ ಬ್ರಿಟಿಷರೊಂದಿಗಿನ ಸಂವಹನದಲ್ಲಿ "ನಿಮ್ಮ ನಿಷ್ಠಾವಂತ ಸೇವಕ" ಎಂಬ ಪದಗಳನ್ನು ಬಳಸಿರುವ ಬಗ್ಗೆ ರಾಹುಲ್ ಗಾಂಧಿಗೆ ತಿಳಿದಿದೆಯೇ ಎಂದು ಪೀಠ ಪ್ರಶ್ನಿಸಿತು.
ರಾಹುಲ್ ಗಾಂಧಿ ರ್ಯಾಲಿಯೊಂದರಲ್ಲಿ ಸಾವರ್ಕರ್ ಅವರನ್ನು "ಉದ್ದೇಶಪೂರ್ವಕವಾಗಿ" ಅವಮಾನಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ದೂರುದಾರ ನೃಪೇಂದ್ರ ಪಾಂಡೆ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಹೊರಡಿಸಲಾದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು' ಮತ್ತು 'ಸಾರ್ವಜನಿಕ ಕಿಡಿಗೇಡಿತನ'ದಂತಹ ಆರೋಪದ ಮೇಲೆ ವಿವಿಧ ನಿಬಂಧನೆಗಳ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಕೀಲರಾದ ಪಾಂಡೆ ಪ್ರಕರಣ ದಾಖಲಿಸಿದ್ದರು.
ನವೆಂಬರ್ 17, 2022 ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರುದ್ಧ ಈ ಪ್ರಕರಣ ದಾಖಲಿಸಲಾಗಿತ್ತು.
Comments