ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ಸರ್ಕಾರದಲ್ಲಿ ಹಣದ ಕೊರತೆಯಿಲ್ಲ: ಗೃಹ ಸಚಿವ ಪರಮೇಶ್ವರ
- new waves technology
- Jun 24
- 1 min read
ನಾನು ಹಾಗೆ ಹೇಳಿಲ್ಲ, ಹಣವಿಲ್ಲ ಎಂದು ಯಾರು ಹೇಳಿದರು? ನಾವು ದಾಖಲೆಯ ಬಜೆಟ್ ಮಂಡಿಸಿದ್ದೇವೆ.

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಯಾವುದೇ ಹಣದ ಕೊರತೆಯಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸೋಮವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದರು.
ಪರಮೇಶ್ವರ ಅವರ ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು ಮತ್ತು ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದೆ.
"ನಾನು ಹಾಗೆ ಹೇಳಿಲ್ಲ, ಹಣವಿಲ್ಲ ಎಂದು ಯಾರು ಹೇಳಿದರು? ನಾವು ದಾಖಲೆಯ ಬಜೆಟ್ ಮಂಡಿಸಿದ್ದೇವೆ. ಭಾಷಣದ ಸಮಯದಲ್ಲಿ ಯಾರೋ ತಮಾಷೆಯಾಗಿ ಕೇಳಿದ್ದಕ್ಕೆ ನಾನು ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದೇನೆ ಅಷ್ಟೇ" ಎಂದು ಪರಮೇಶ್ವರ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಸಿಎಂ ಸಿದ್ದರಾಮಯ್ಯ ಅವರು 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ನಾನು ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಲ್ಲ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಆಗಿರಬಹುದು. ಡಿಪಿಆರ್ ಮಾಡೋದ್ರಲ್ಲಿ ತಡ ಆಗಿರಬಹುದು" ಎಂದು ಹೇಳಿದರು.
"ನಮ್ಮ ಸರ್ಕಾರದಲ್ಲಿ ಯಾವುದೇ ಆರ್ಥಿಕ ತೊಂದರೆ ಇಲ್ಲ ಎಂದು ನಾನು ಈಗ ಅಧಿಕೃತವಾಗಿ ಹೇಳುತ್ತಿದ್ದೇನೆ. ನಾನು ಅದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕೆಲವೊಮ್ಮೆ, ಹಣ ಬಿಡುಗಡೆ ಮಾಡುವ ಮೊದಲು ಡಿಪಿಆರ್ ಮತ್ತು ಅಂದಾಜುಗಳನ್ನು ಸಿದ್ಧಪಡಿಸಬೇಕಾಗಿರುವುದರಿಂದ, ಹಣ ಬಿಡುಗಡೆಯಲ್ಲಿ ವಿಳಂಬವಾಗಬಹುದು. ಅದನ್ನು ಹೊರತುಪಡಿಸಿ, ಬೇರೇನೂ ಇಲ್ಲ. ನಮ್ಮ ಸರ್ಕಾರದಲ್ಲಿ ಯಾವುದೇ ಕಾರಣಕ್ಕೂ ಹಣದ ಕೊರತೆಯಿಲ್ಲ. ನಾನು ಅದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಯಾರಾದರೂ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ನಾನು ಅದನ್ನು ಸರಿಪಡಿಸುತ್ತಿದ್ದೇನೆ" ಎಂದು ಗೃಹ ಸಚಿವರು ತಿಳಿಸಿದರು.
ಇದೇ ವೇಳೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಕರಣ ಸಂಬಂಧ ಮಾತನಾಡಿ, "ನನಗೆ ಬಂದಿರುವ ಮಾಹಿತಿ ಪ್ರಕಾರ ಅನಂತ್ ಕುಮಾರ್ ಹೆಗಡೆ ಹೈವೈನಲ್ಲಿ ಬರಬೇಕಾದರೆ ಘಟನೆ ನಡೆದಿದೆ. ಡ್ರೈವರ್, ಗನ್ ಮ್ಯಾನ್ ಕಾರು ನಿಲ್ಲಿಸಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಗನ್ ಮ್ಯಾನ್ ಹೊಡೆದಿಲ್ಲ ಅಂತಿದ್ದಾರೆ. ಇದರ ಬಗ್ಗೆ ಈಗಲೇ ಹೇಳೋಕೆ ಆಗಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಇನ್ನಷ್ಟು ದಿನ ಕಾದು ನೋಡೋಣ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ" ಎಂದರು.
Comments