top of page

'ನಿರಂತರ ಅವಮಾನ, ಹತಾಶೆ': ದಿಢೀರ್ ನಿವೃತ್ತಿಗೆ ಕಾರಣ ತಿಳಿಸಿದ R Ashwin ತಂದೆ!

  • Writer: new waves technology
    new waves technology
  • Dec 19, 2024
  • 2 min read

ರವಿಚಂದ್ರನ್ ಅಶ್ವಿನ್ ಅವರ ಅನಿರೀಕ್ಷಿತ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಘಾತ ಮತ್ತು ಅಚ್ಚರಿಗೆ ಕಾರಣವಾಗಿದ್ದು, ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದ ಅಶ್ವಿನ್ ಏಕಾಏಕಿ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಏಕೆ?

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಳಿಕ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಆರ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು, ಅವರ ಈ ನಿರ್ಧಾರಕ್ಕೆ ಅವರ ತಂದೆ ಕಾರಣಗಳನ್ನು ತಿಳಿಸಿದ್ದಾರೆ.

ಹೌದು.. ರವಿಚಂದ್ರನ್ ಅಶ್ವಿನ್ ಅವರ ಅನಿರೀಕ್ಷಿತ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಘಾತ ಮತ್ತು ಅಚ್ಚರಿಗೆ ಕಾರಣವಾಗಿದ್ದು, ಇನ್ನು ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದ ಅಶ್ವಿನ್ ಏಕಾಏಕಿ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು.

ಇದೀಗ ಇದೇ ವಿಚಾರವಾಗಿ ಅಶ್ವಿನ್ ಅವರ ತಂದೆ ಮಾತನಾಡಿದ್ದು ದಿಢೀರ್ ನಿರ್ಧಾರಕ್ಕೆ ಹಲವು ಕಾರಣಗಳನ್ನು ವಿವರಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅಶ್ವಿನ್ ಅವರ ತಂದೆ ರವಿಚಂದ್ರನ್ ಅವರು, ತಮ್ಮ ಮಗನನ್ನು ಭಾರತ ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿತ್ತು. ಇದು ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


‘ಕೊನೆಯ ಗಳಿಗೆಯಲ್ಲಿ ನನ್ನ ಮಗನ ನಿವೃತ್ತಿ ನಿರ್ಧಾರದ ಬಗ್ಗೆ ನನಗೆ ತಿಳಿಯಿತು. ಅವನ ಮನಸ್ಸಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ. ನಾನಂತೂ ಸಂಪೂರ್ಣ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಅವರು ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ.

ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವನು ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್​ಗೆ ಮಾತ್ರ ಗೊತ್ತು, ಇದರಲ್ಲಿ ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.


ಹಠಾತ್ ನಿವೃತ್ತಿ ನಮಗೂ ಅಚ್ಚರಿ ತಂದಿದೆ

ಅಶ್ವಿನ್ ಅವರ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಹಾಗಾಗಿಯೇ ಅಶ್ವಿನ್ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಅಶ್ವಿನ್ ಅವರ ತಂದೆ ರವಿಚಂದ್ರನ್ ಹೇಳಿದ್ದಾರೆ.

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್

ಪ್ರಸ್ತುತ ಅಶ್ವಿನ್ ಟೀಂ ಇಂಡಿಯಾದ ಬೆಸ್ಟ್ ಬೌಲರ್ ಆಗಿದ್ದರೂ, ವಿಶ್ವದಲ್ಲೇ ನಂಬರ್ 1 ಟೆಸ್ಟ್ ಬೌಲರ್ ಆಗಿದ್ದರೂ, ಟೀಂ ಇಂಡಿಯಾದಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂಬುದು ಅಶ್ವಿನ್ ಅವರ ತಂದೆ ಆರೋಪ. ಪ್ರಮುಖವಾಗಿ ಅಶ್ವಿನ್ ಎರಡೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಕೊನೆಯ ಫೈನಲ್ ಪಂದ್ಯದಲ್ಲಿ ಅಶ್ವಿನ್​ಗೆ ಆಡುವ ಅವಕಾಶ ಸಿಗಲಿಲ್ಲ. ಈ ವಿಚಾರವನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಪ್ರಸ್ತಾಪಿಸಿದ್ದರು. ನೀವು ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್‌ನನ್ನು ಆಡುವ ಹನ್ನೊಂದರಲ್ಲಿ ಆಯ್ಕೆ ಮಾಡಿದ್ದೀರಿ. ಆದರೆ ವಿಶ್ವದ ನಂಬರ್ 1 ಟೆಸ್ಟ್ ಬೌಲರ್​ನ ಮಾತ್ರ ಏಕೆ ಬೆಂಚ್ ಮೇಲೆ ಕುಳಿಸಿದ್ದೀರಿ ಎಂದು ಗವಾಸ್ಕರ್ ಪ್ರಶ್ನಿಸಿದ್ದರು.

Comments


bottom of page