ಪಾಕಿಸ್ತಾನಕ್ಕೆ ಭಾರತ ಬರಲ್ಲ ಎಂದ ಬೆನ್ನಲ್ಲೇ ಹೈಡ್ರಾಮಾ; ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ಪಿಸಿಬಿ ಯೋಚನೆ
- new waves technology
- Nov 12, 2024
- 2 min read
ಮುಂದಿನ ವರ್ಷ, ಅಂದರೆ 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಮತ್ತು ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತಲೇ ಇದೆ. ಪ್ರಮುಖ ಐಸಿಸಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಬೇಕಿದೆ.

ಆದರೆ, ಭದ್ರತಾ ದೃಷ್ಟಿಯಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಈಗಾಗಲೇ ಪಿಸಿಬಿಗೆ ದೃಢಪಡಿಸಿದೆ. ಇದರ ಮುಂದುವರೆದ ಭಾಗವಾಗಿ, ಪಿಸಿಬಿಯು ಐಸಿಸಿ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ದೃಢೀಕರಣ ಮೇಲ್ ಕಳುಹಿಸಿದ್ದು, ಪಾಕಿಸ್ತಾನವು ಐಸಿಸಿ ಟೂರ್ನಿಯಿಂದ "ಹಿಂದೆ ಸರಿಯಬಹುದು" ಎಂದು ವರದಿ ಹೇಳಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ನಡೆಸಬೇಕು ಎಂಬುದು ಪಿಸಿಬಿ ಇರಾದೆ. ಭಾರತವು ಪಾಕ್ ಪ್ರವಾಸ ಮಾಡಲ್ಲ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಸಿದ್ಧವಿಲ್ಲ ಎಂಬುದನ್ನು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಈಗಾಗಲೇ ಹೇಳಿದ್ದಾರೆ. ಒಂದು ವೇಳೆ ಪಾಕಿಸ್ತಾನ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದ್ದರೆ, ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ (ಯುಎಇ ಅಥವಾ ಶ್ರೀಲಂಕಾ) ಆಡುತ್ತಿತ್ತು.
ಇದೀಗ, ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವಂತೆ ಪಿಸಿಬಿಗೆ ಹೇಳಲು ಪಾಕಿಸ್ತಾನ ಸರ್ಕಾರ ಯೋಚಿಸುತ್ತಿದೆ ಎಂದು ವರದಿ ಮಾಡಿದೆ.
"ಇಂತಹ ಸಂದರ್ಭದಲ್ಲಿ, ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪಿಸಿಬಿ ಜೊತೆಗೆ ಮಾತನಾಡಲು ಸರ್ಕಾರ ಯೋಚಿಸುತ್ತಿದೆ" ಎಂದು ಮೂಲವನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಅಲ್ಲದೆ ಪಾಕಿಸ್ತಾನದ ಫೆಡರಲ್ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವರದಿ ಹೇಳಿದೆ.
ಭಾರತದ ವಿರುದ್ಧ ಆಡಲ್ಲ
ಮುಂದೆ ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಆಡಲು ಪಿಸಿಬಿ ನಿರಾಕರಿಸಬಹುದು. ಪಾಕಿಸ್ತಾನ ಸರ್ಕಾರವು ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವವರೆಗೆ ಯಾವುದೇ ಐಸಿಸಿ ಅಥವಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಾವಳಿಗಳಲ್ಲಿ ಭಾರತದ ವಿರುದ್ಧ ಆಡುವುದನ್ನು ನಿರಾಕರಿಸುವಂತೆ ಪಿಸಿಬಿಯನ್ನು ಕೇಳಬಹುದು ಎಂದು ವರದಿ ಹೇಳಿದೆ.
ಕಳೆದ ವರ್ಷ ಏಷ್ಯಾಕಪ್ ಟೂರ್ನಿ ಕೂಡಾ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಭಾರತದ ವಿರೋಧದಿಂದಾಗಿ ಟೂರ್ನಿ ಅಂತಿಮವಾಗಿ ಹೈಬ್ರಿಡ್ ಮಾದರಿಯಲ್ಲಿ ನಡೆಯಿತು. ಭಾರತದ ಪಂದ್ಯಗಳು ಶ್ರೀಲಂಕಾಗೆ ಸ್ಥಳಾಂತರಗೊಂಡವು.
ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ 2012ರಲ್ಲಿ ಪರಸ್ಪರ ದ್ವಿಪಕ್ಷೀಯ ಸರಣಿಯಲ್ಲಿ ಆಡಿವೆ. ಆ ನಂತರ ಉಭಯ ದೇಶಗಳು ಐಸಿಸಿ ಪಂದ್ಯಾವಳಿಗಳು ಮತ್ತು ಏಷ್ಯಾ ಕಪ್‌ನಲ್ಲಿ ಮಾತ್ರವೇ ಪರಸ್ಪರ ಸ್ಪರ್ಧಿಸಿವೆ. 2016ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಿತ್ತು.
ಫೆಬ್ರವರಿ 19ರಿಂದ 2025ರ ಚಾಂಪಿಯನ್ಸ್ ಟ್ರೋಫಿ
2025ರ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗಿಯಾಗಲಿವೆ. ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿ ಪಂದ್ಯಗಳಿಗೆ ಆತಿಥೇಯ ನಗರಗಳಾಗಿವೆ.
ಕೊನೆಯದಾಗಿ 1996ರ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.
Comentarios