top of page

ಬೆಂಗಳೂರಿನಲ್ಲಿ ಕಾಲ್ತುಳಿತ: RCB ಅಭಿಮಾನಿಗಳ ಸಾವಿಗೆ ವಿಜಯ್‌ ಮಲ್ಯ, ಸಚಿನ್ ತೆಂಡೂಲ್ಕರ್ ಸೇರಿ ಹಲವರು ತೀವ್ರ ಸಂತಾಪ

  • Writer: new waves technology
    new waves technology
  • Jun 5
  • 1 min read

ಬೆಂಗಳೂರಿನಲ್ಲಿ ಸಂಭವಿಸಿದ ಜೀವಹಾನಿ ಮತ್ತು ಗಾಯಾಳುಗಳ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಐಪಿಎಲ್ ಚಾಂಪಿಯನ್‌ಗಳ ಜತೆ ಸಂಭ್ರಮಿಸಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಅನಿರೀಕ್ಷಿತ ದುರಂತ ಎದುರಾಯಿತು.

ಬೆಂಗಳೂರು: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಬಳಿಕ ನಗರದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಗೆ ಆರ್'ಸಿಬಿ ತಂಡದ ಮಾಜಿ ಮಾಲೀಕ ಹಾಗೂ ಉದ್ಯಮಿ ವಿಜಯ್ ಮಲ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ಸಂಭವಿಸಿದ ಜೀವಹಾನಿ ಮತ್ತು ಗಾಯಾಳುಗಳ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಐಪಿಎಲ್ ಚಾಂಪಿಯನ್‌ಗಳ ಜತೆ ಸಂಭ್ರಮಿಸಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಅನಿರೀಕ್ಷಿತ ದುರಂತ ಎದುರಾಯಿತು. ಸಂತ್ರಸ್ತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಇನ್ನು ದುರ್ಘಟನೆಗೆ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಆರ್‌ಸಿಬಿಯ ಮಾಜಿ ಆಟಗಾರ ಎ.ಬಿ.ಡಿವಿಲಿಯರ್ಸ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್‌ ಅವರು ಸೇರಿದಂತೆ ಹಲವಾರು ಆಟಗಾರರು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿನ್ ತೆಂಡೂಲ್ಕರ್ ಅವರು, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ನಿಜಕ್ಕೂ ಘೋರ ದುರಂತವಾಗಿದೆ. ಮೃತರಾದವರ ಪ್ರತಿಯೊಂದು ಕುಟುಂಬವನ್ನು ನೆನಪಿಸಿಕೊಂಡರೆ ನನ್ನ ಹೃದಯ ನೋವಿನಿಂದ ತುಂಬುತ್ತದೆ. ಅವರಿಗೆ ನನ್ನ ಸಂತಾಪಗಳು, ಆ ಕುಟುಂಬಗಳಿಗೆ ನೋವು ತಡೆಯುವ ಶಕ್ತಿ ನೀಡಲೆಂದು ‍ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಜಗತ್ತಿಗೆ ದುಃಖದ ದಿನ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ, ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಅನಿಲ್ ಕುಂಬ್ಳೆಯವರು ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಿಂದ ಬಾಧಿತರಾದವರಿಗೆ ನನ್ನ ಸಂತಾಪ’ ಎಂದು ಎ.ಬಿ.ಡಿವಿಲಿಯರ್ಸ್‌ ತಿಳಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್‌ ಕೂಡ ದುಃಖ ಹಂಚಿಕೊಂಡಿದ್ದು, ‘ಸಂಭ್ರಮಾಚರಣೆ ಊಹಿಸಲಾಗದ ದುರಂತವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Comments


bottom of page