top of page

'ಬೆಂಗಳೂರಿನ ಟ್ರಾಫಿಕ್' ಸಮಸ್ಯೆ ಸರಿಪಡಿಸಲು ದೇವರೇ ಬಂದರೂ ಸಾಧ್ಯವಿಲ್ಲ': ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ

  • Writer: new waves technology
    new waves technology
  • Feb 21
  • 1 min read

ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.

ಬೆಂಗಳೂರು: ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ದೇವರೂ ಬಂದರೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶುಕ್ರವಾರ ಆಗ್ರಹಿಸಿದೆ.

ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಸ್ಯೆಗಳನ್ನು ನಿಭಾಯಿಸುವ ಸಮರ್ಥ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಒತ್ತಾಯಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ, "ನಾನು ಮಾಧ್ಯಮ ಸ್ನೇಹಿತರಿಗೆ ಮತ್ತು ಇತರರಿಗೆ ಹೇಳಲು ಬಯಸುತ್ತೇನೆ, ಸ್ವತಃ ದೇವರೇ ಮೇಲಿನಿಂದ ಇಳಿದು ಬಂದರೂ, ಮುಂದಿನ ಒಂದು ವರ್ಷ, ಎರಡು ವರ್ಷ ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರನ್ನು(ಸರಿಪಡಿಸಲು) ಸಾಧ್ಯವಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಲು ನಾವು ಸರಿಯಾಗಿ ಯೋಜಿಸಬೇಕು, ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಬೇಕು ಮತ್ತು ಮುಂದಿನ ದಿನಗಳಿಗೆ ಸರಿಯಾದ ರೂಪರೇಷೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುತ್ತೇನೆ ಎಂದು ಡಂಗೂರ ಸಾರಿದ್ದ ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿಗಳ ಹೊಸ ವರಸೆ ನೋಡಿ. ಸ್ವತಃ ದೇವರೇ ಬಂದರೂ 2-3 ವರ್ಷ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲವಂತೆ. ಇದು ಡಿಸಿಎಂ ಸಾಹೇಬರ ನುಡಿಮುತ್ತುಗಳು ಎಂದು ಟೀಕಿಸಿದ್ದಾರೆ.

ಬೆಂಗಳೂರಿನ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ರಾಜೀನಾಮೆ ನೀಡಿ ಸಮರ್ಥ ವ್ಯಕ್ತಿಗೆ ದಾರಿ ಮಾಡಿಕೊಡಿ. ನಿಮ್ಮ ರಾಜಕೀಯ ಪ್ರತಿಷ್ಠೆಗೆ, ಅಧಿಕಾರದ ದುರಾಸೆಗೆ ಬೆಂಗಳೂರು ನಗರದ ಅಭಿವೃದ್ಧಿಯನ್ನು ಯಾಕೆ ಬಲಿ ಕೊಡುತ್ತೀರಿ" ಎಂದು ಆರ್ ಅಶೋಕ್ "ಎಕ್ಸ್" ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಹ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರನ್ನು ಸಿಂಗಾಪುರದಂತೆ ಮಾಡುವುದಾಗಿ ಮತ್ತು ರಾಜ್ಯವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಶಿವಕುಮಾರ್ ಮತ್ತು ಕಾಂಗ್ರೆಸ್ ಈಗ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಿದ್ದಾರೆ.

ಇನ್ನೂ, ಒಂದು ಗುಂಡಿ ಮುಚ್ಚಲು ಇವರಿಗೆ ಯೋಗ್ಯತೆ ಇಲ್ಲ, ಅನುದಾನ ಕೊಡಲು ಆಗಲ್ಲ. ಬೆಂಗಳೂರು ಬಗ್ಗೆ ಡಿಕೆ ಶಿವಕುಮಾರ್ ಅವರ ಈ ಥರ ಹೇಳಿಕೆ ಸಹಜವಾಗಿ ಎಲ್ಲರಿಗೂ ಬೇಸರ ತರಿಸಿದೆ. ಬೆಂಗಳೂರನ್ನು ಸಿಂಗಾಪುರ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದ್ರು. ಒಂದು ಗುಂಡಿ‌ ಮುಚ್ಚಲು ಯೋಗ್ಯತೆ ಇಲ್ಲ ಇವರಿಗೆ, ಟನೆಲ್ ರಸ್ತೆ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು.

Comments


bottom of page