ಬೆಳಗಾವಿ: ಪೊಲೀಸ್ ಠಾಣೆ ಮುಂದೆ ತಂದೆ ಶವವಿಟ್ಟು ಇನ್ಸ್‌ಪೆಕ್ಟರ್ ಪ್ರತಿಭಟನೆ!
- new waves technology
- Feb 8
- 1 min read

ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ತಂದೆಯ ಮೃತದೇಹವನ್ನು ಪೊಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ರಾಯಬಾಗ್ ತಾಲ್ಲೂಕಿನ ಹಾರೋಗೇರಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಎಸ್‌ಐ) ಅವರ ದುಷ್ಕೃತ್ಯವು ತಮ್ಮ ತಂದೆಯ ಸಾವಿಗೆ ಕಾರಣ ಎಂದು ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ ಸದಲಗಿ ಅವರು ಆರೋಪಿಸಿದ್ದಾರೆ.
ಹಾರೋಗೇರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಶೋಕ ಸದಲಗಿ ಅವರು ಠಾಣೆಯ ಮುಂದೆ ತಮ್ಮ ತಂದೆಯ ಶವವಿಟ್ಟು ಪ್ರತಿಭಟನೆ ನಡೆಸಿದರು.ಇನ್ಸ್‌ಪೆಕ್ಟರ್ ಅಶೋಕ ಸದಲಗಿ ಅವರ ತಂದೆ ಅಣ್ಣಪ್ಪ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಅವರ ತಂದೆ ಅಣ್ಣಪ್ಪ ಅವರನ್ನು ಇಡೀ ದಿನ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕಿರುಕುಳ ನೀಡಲಾಗಿದೆ ಎಂದು ಇನ್ಸ್‌ಪೆಕ್ಟರ್ ಅಶೋಕ ದೂರಿದ್ದಾರೆ.
ಸಂಜೆಯ ಹೊತ್ತಿಗೆ ಅಣ್ಣಪ್ಪ ಅಸ್ವಸ್ಥರಾದರು, ರಕ್ತದೊತ್ತಡ ಮತ್ತು ಶುಗರ್ ಕಡಿಮೆಯಾಯಿತು. ಅವರ ಎರಡನೇ ಮಗ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ನಿಧನರಾದರು.
ಘಟನೆಯಿಂದ ಕೋಪಗೊಂಡ ಇನ್ಸ್‌ಪೆಕ್ಟರ್ ಸದಲಗಿ, ನ್ಯಾಯಕ್ಕಾಗಿ ಮತ್ತು ಎಸ್‌ಐ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಹಾರೋಗೇರಿ ಪೊಲೀಸ್ ಠಾಣೆಯ ಮುಂದೆ ತಮ್ಮ ತಂದೆಯ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದರು.
ಆದಾಗ್ಯೂ, ಚಿಕ್ಕೋಡಿ ಡಿವೈಎಸ್‌ಪಿ ಸ್ಥಳಕ್ಕೆ ಧಾವಿಸಿ ಇನ್ಸ್‌ಪೆಕ್ಟರ್ ಸದಲಗಿ ಅವರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದರು.
ಜನವರಿ10ರಂದು ಇನ್ಸ್‌ಪೆಕ್ಟರ್ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನಡೋಣಿ ಪ್ರತಾಪ್ ಹರೋಲಿ, ವಸಂತ ಚೌಗಲಾ ಎಂಬುವರು ಅಕ್ರಮವಾಗಿ ಪ್ರವೇಶ ಮಾಡಿದ್ದರು. ಅಕ್ರಮವಾಗಿ ಪ್ರವೇಶಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಮತ್ತು ಅವರ ಗ್ಯಾಂಗ್ ಅಣ್ಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೂಡಲೆ ಅಣ್ಣಪ್ಪ 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ್ದರು. ಬಳಿಕ, ಅಣ್ಣಪ್ಪ ಹಾಗೂ ಬಾಬು ನಡೋಣಿ ಸೇರಿದಂತೆ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಪೊಲೀಸರು ಅಣ್ಣಪ್ಪರನ್ನು ಇಡೀ ದಿನ ಠಾಣೆಯಲ್ಲಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜೆ ಆಗುತ್ತಿದ್ದಂತೆ ಶುಗರ್ ಕಡಿಮೆಯಾಗಿ, ಬಿಪಿ ಹೆಚ್ಚಾಗಿ ಅಣ್ಣಪ್ಪ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ, ಅಣ್ಣಪ್ಪರ ಎರಡನೇ ಪುತ್ರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆರೋಪಿಗಳು ನೀಡಿದ ಪ್ರತಿದೂರು ಆಧರಿಸಿ, ಫೆಬ್ರವರಿ 2 ರಂದು ಹಾರೋಗೇರಿ ಪೊಲೀಸ್ ಠಾಣೆಯ ಎಸ್‌ಐ ಇನ್ಸ್‌ಪೆಕ್ಟರ್ ಸದಲಗಿ ಅವರ ಸಹೋದರನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬೆಳವಣಿಗೆ ಬಗ್ಗೆ ಪೊಲೀಸ್ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
コメント