ಮಹಾಲಿಂಗಪುರ | ಸಮರ್ಥ್ ಯೋಜನೆಯಡಿ ಶಿಬಿರ ಆಯೋಜನೆ: ಕೈಮಗ್ಗ ಉದ್ಯಮಕ್ಕೆ ಉತ್ತೇಜನ
- new waves technology
- Nov 18, 2024
- 1 min read

ಮಹಾಲಿಂಗಪುರ: ನಶಿಸಿ ಹೋಗುತ್ತಿರುವ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ಡಚ್ ಬಡಾವಣೆಯ ಬಳಿ ನೇಕಾರರಿಗೆ ಉಚಿತವಾಗಿ ಕೈಮಗ್ಗ ತರಬೇತಿ ನೀಡಲಾಗುತ್ತಿದೆ.
ಸೌಜನ್ಯ ಕೈಮಗ್ಗ ನೇಕಾರರ ಸಹಕಾರಿ ಸಂಘ, ಬೆಂಗಳೂರಿನ ನೇಕಾರ ಸೇವಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ 'ಸಮರ್ಥ್ ಯೋಜನೆ'ಯಡಿ ಈ ಶಿಬಿರ ಆಯೋಜಿಸಲಾಗಿದ್ದು, ನೇಕಾರ ಸಮಾಜದ 30 ಮಹಿಳೆಯರು ಕೈಮಗ್ಗ ತರಬೇತಿ ಪಡೆಯುತ್ತಿದ್ದಾರೆ.
'ಸಮರ್ಥ್ ಯೋಜನೆ' ಕೈಮಗ್ಗ ಉತ್ಪಾದನೆ ಮತ್ತು ಅದರ ಸಂಬಂಧಿತ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶ ಸುಧಾರಿಸಲು ಕೇಂದ್ರ ಸರ್ಕಾರವು ಆರಂಭಿಸಿರುವ ಯೋಜನೆಯಾಗಿದೆ.
10 ಕೈಮಗ್ಗಗಳನ್ನು ಸ್ಥಾಪಿಸಿ, 45 ದಿನಗಳವರೆಗೆ ಸ್ಟೈಫಂಡ್‌ನೊಂದಿಗೆ ಕೈಮಗ್ಗ ತರಬೇತಿ ನೀಡಲಾಗುತ್ತಿದೆ. ಬಳಿಕ ಅವರಿಗೆ ಕೈಮಗ್ಗ ಉದ್ಯೋಗ ಕಲ್ಪಿಸುವ ಗುರಿಯನ್ನೂ ಹೊಂದಲಾಗಿದೆ. ಶಿಬಿರದಲ್ಲಿ ಹತ್ತಿಯಿಂದ ತಯಾರಿಸಿದ ಟವೆಲ್, ಲುಂಗಿ, ಕರವಸ್ತ್ರ, ಶರ್ಟ್ ಬಟ್ಟೆ ಮತ್ತಿತರ ಕೈಮಗ್ಗದ ಉತ್ಪನ್ನಗಳು ತಯಾರಾಗುತ್ತಿವೆ. ಒಬ್ಬರು ತರಬೇತುದಾರ, ಇಬ್ಬರು ಸಹಾಯಕ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಶಿಬಿರ ಆರಂಭಗೊಂಡಿದ್ದು, ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.
'ಈ ಮೊದಲು ನನಗೆ ಕೈಮಗ್ಗದ ಬಗ್ಗೆ ತಿಳಿದಿರಲಿಲ್ಲ. ಇಲ್ಲಿಗೆ ಬಂದ ನಂತರ ಕೈಮಗ್ಗದ ಪರಿಚಯವಾಯಿತು. ನೇಕಾರಿಕೆ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಬಂದಿದೆ. ಪುರಾತನ ಕೈಗಾರಿಕೆಗಳಲ್ಲೊಂದಾದ ಕೈಮಗ್ಗ ಉದ್ಯಮಕ್ಕೆ ಉತ್ತೇಜನ ಸಿಗಬೇಕಿದೆ' ಎನ್ನುತ್ತಾರೆ ಶಿಬಿರಾರ್ಥಿ ಸುರೇಖಾ ಹಾಸಿಲಕರ.
ಮಹಾಲಿಂಗಪುರದಲ್ಲಿ ಕೈಮಗ್ಗ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳುಮಹಾಲಿಂಗಪುರದಲ್ಲಿ ಕೈಮಗ್ಗ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳುಜಿ.ಎಸ್. ಗೊಂಬಿ ಸೌಜನ್ಯ ಕೈಮಗ್ಗ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಸಮರ್ಥ್ ಯೋಜನೆ ಮೂಲಕ ನೇಕಾರ ಸಮಾಜದ ಮಹಿಳೆಯರನ್ನು ಗುರುತಿಸಿ ಅವರಿಗೆ ಸವಲತ್ತು ತರಬೇತಿ ನೀಡಿ ಆರ್ಥಿಕ ಸ್ವಾವಲಂಬನೆ ಬೆಳೆಸಲಾಗುತ್ತಿದೆ
Comments