top of page

ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಎಂಬುದೆಲ್ಲಾ BJP ಪಿತೂರಿ: ಡಿಸಿಎಂ ಡಿ.ಕೆ. ಶಿವಕುಮಾರ್

  • Writer: new waves technology
    new waves technology
  • Mar 13
  • 1 min read

ಯಾರಾದರೂ ನೋಡಿದ್ದಾರಾ? ಕೇಳಿದ್ದಾರಾ? ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಹೋಗುತ್ತೇವೆ. ಅಲ್ಲಿ ಅನೇಕರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ?

ಬೆಂಗಳೂರು: ‘ನಟಿ ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಎಂಬುದೆಲ್ಲಾ ಕೇವಲ ಊಹಾಪೋಹ. ಇದು ಬಿಜೆಪಿಯವರ ಪಿತೂರಿಯಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ನೋಡಿದ್ದಾರಾ? ಕೇಳಿದ್ದಾರಾ? ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಹೋಗುತ್ತೇವೆ. ಅಲ್ಲಿ ಅನೇಕರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ನಮ್ಮ ಜೊತೆ ಫೋಟೋ ತೆಗೆಸಿಕೊಂಡವರು ಅಪರಾಧ ಮಾಡಿದರೆ ನಾವು ಅದಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಲು ಸಾಧ್ಯವೇ? ಇಂತಹ ಸಚಿವರು ಈ ರೀತಿಯಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಇದ್ದರೆ ನೀವು ಚರ್ಚೆ ಮಾಡಿ. ಯಾವುದೇ ಸಚಿವ ಅಪರಾಧ ಮಾಡಲು ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.

ನಟಿ ರನ್ಯಾ ರಾವ್ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸಿಎಂ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ನಾನು ಇತ್ತೀಚೆಗೆ ದುಬೈಗೆ ತೆರಳಿದ್ದೆ. ಆಗ ನನ್ನ ಉಂಗುರ, ಬೆಲ್ಟ್, ವಾಚ್‍ಗಳನ್ನು ತೆಗೆಸಿದ್ದರು. ಇಂತಹ ಭದ್ರತೆ ಮಧ್ಯೆ 14 ಕೆ.ಜಿ ಚಿನ್ನ ಕಳ್ಳಸಾಗಾಣೆ ಹೇಗೆ ಸಾಧ್ಯ ಎಂದು ನನಗೂ ಅಚ್ಚರಿಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಟಿಬಿ ಜಯಚಂದ್ರ ಕೂಡ ಈ ವಿಚಾರವನ್ನು ವದಂತಿ ಎಂದೇ ಹೆಳಿದರು. ಪ್ರಕರಣಗಳಲ್ಲಿ ರನ್ಯಾ ರಾವ್'ಗೆ ಸಾಥ್ ನೀಡಿದ ಸಚಿವರನ್ನು ಪತ್ತೆಹಚ್ಚಿ, ಹೆಸರು ಬಹಿರಂಗ ಪಡಿಸಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಏತನ್ಮಧ್ಯೆ, ಡಿಜಿಪಿ ರಾಮಚಂದ್ರ ರಾವ್ ಅವರ 'ಪ್ರೋಟೋಕಾಲ್ ಸವಲತ್ತು' ದುರುಪಯೋಗಪಡಿಸಿಕೊಂಡ ಬಗ್ಗೆ ತನಿಖೆ ನಡೆಸುತ್ತಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌಪ್ಯವಾಗಿ ವರದಿ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Comentários


bottom of page