ರಾಜ್ಯದ ಹಣಕಾಸು ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ: ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಒತ್ತಾಯ
- new waves technology
- Feb 19
- 2 min read
ಶಕ್ತಿ ಯೋಜನೆಯಿಂದಾಗಿ ಕೆಎಸ್ ಆರ್ ಟಿಸಿಗೆ ರೂ. 7,000 ಕೋಟಿ ಬಾಕಿಯನ್ನು ರಾಜ್ಯ ಸರ್ಕಾರ ಇನ್ನೂ ಪಾವತಿಸಿಲ್ಲ. ಇದರಿಂದಾಗಿ KSRTC ಮುಚ್ಚುವ ಹಂತ ತಲುಪಿದೆ. ಇದು ಕಟು ವಾಸ್ತವವಾಗಿದೆ.

ಬೆಂಗಳೂರು: ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆಗೂ ಮುನ್ನಾ ರಾಜ್ಯದಲ್ಲಿನ ಹಣಕಾಸು ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಬಿಜೆಪಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಹಣಕಾಸು ಬರಿದಾಗಿದ್ದು, ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂದು ಆರೋಪಿಸಿದರು.
ಅಸಮರ್ಪಕ ಹಣಕಾಸು ನಿರ್ವಹಣೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ (KSRTC) ಮುಚ್ಚುವ ಹಂತ ತಲುಪಿದೆ. ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಉಚಿತ ಯೋಜನೆಗಳಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಜನರು ದೊಡ್ಡ ಬೆಲೆ ತೆತ್ತಿದ್ದಾರೆ ಎಂದರು. ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.30 ರಷ್ಟು, ಆಸ್ತಿ ನೋಂದಣಿ ಶುಲ್ಕ ಶೇ. 600ರಷ್ಟು, ಮೆಟ್ರೋ ಪ್ರಯಾಣ ದರ ಶೇ. 50 ಹಾಗೂ ಹಾಲಿನ ಬೆಲೆ ಶೇ. 15 ರಷ್ಟು ಏರಿಕೆಯಾಗಿದೆ ಎಂದು ಟೀಕಿಸಿದರು.
ಶಕ್ತಿ ಯೋಜನೆಯಿಂದಾಗಿ ಕೆಎಸ್ ಆರ್ ಟಿಸಿಗೆ ರೂ. 7,000 ಕೋಟಿ ಬಾಕಿಯನ್ನು ರಾಜ್ಯ ಸರ್ಕಾರ ಇನ್ನೂ ಪಾವತಿಸಿಲ್ಲ. ಇದರಿಂದಾಗಿ KSRTC ಮುಚ್ಚುವ ಹಂತ ತಲುಪಿದೆ. ಇದು ಕಟು ವಾಸ್ತವವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ. 1. 19 ಲಕ್ಷ ಕೋಟಿ ಸಾಲ ಪಡೆದಿದ್ದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಮತ್ತಿತರ ಇಲಾಖೆಗಳಿಂದ ಬಾಕಿ ಇರುವ ರೂ. 6,000 ಕೋಟಿಯನ್ನು ಪಾವತಿಸಬೇಕಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೇ ಹೇಳಿದ್ದಾರೆ. ಇವು ರಾಜ್ಯ ಸರ್ಕಾರದ ನಿರ್ಧಾರಗಳಾಗಿರುವುದರಿಂದ ರಾಜ್ಯ ಸ್ಪಷ್ಟವಾಗಿ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ರಾಜ್ಯ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮಾರ್ಚ್ 7 ರಂದು ತಮ್ಮ 16ನೇ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ನೈಜ ಆರ್ಥಿಕ ಪರಿಸ್ಥಿತಿ ಕುರಿತು ಜನತೆಗೆ ವಿವರಿಸಬೇಕು. ಹಣಕಾಸು ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ದೂಷಿಸುತ್ತಿರುವುದನ್ನು ಟೀಕಿಸಿದ ವಿಜಯೇಂದ್ರ, ದೇಶದಲ್ಲಿ ಬೇರೆ ಯಾವುದೇ ಮೆಟ್ರೋ ನಿಗಮಗಳು ಇಷ್ಟೊಂದು ದರ ಹೆಚ್ಚಿಸಿಲ್ಲ. ಬೆಂಗಳೂರು ಮೆಟ್ರೋ ರೈಲು ದೇಶದಲ್ಲಿಯೇ ಅತ್ಯಂತ ದುಬಾರಿಯನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.
ವಿಜಯಪುರದ ಭಿನ್ನಮತೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಕೇಂದ್ರ ನಾಯಕತ್ವದಿಂದ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಕ್ರಮ ಕುರಿತು ಪಕ್ಷದ ಹಿರಿಯ ನಾಯಕರು ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಪಕ್ಷವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ ಎಂದು ವಿಜಯೇಂದ್ರ ಹೇಳಿದರು.
Commentaires