ಲಕ್ನೋದ ಲೋಕಬಂಧು ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಒಬ್ಬ ರೋಗಿ ಸಾವು, 200 ಮಂದಿ ಸ್ಥಳಾಂತರ
- new waves technology
- Apr 15
- 1 min read
ಉತ್ತರ ಪ್ರದೇಶ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದರು.

ಲಕ್ನೋ: ಸರ್ಕಾರಿ ಸ್ವಾಮ್ಯದ ಲೋಕಬಂಧು ರಾಜ್ ನಾರಾಯಣ್ ಸಂಯೋಜಿತ ಆಸ್ಪತ್ರೆಯಲ್ಲಿ ನಿನ್ನೆ ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಬ್ಬ ರೋಗಿ ಮೃತಪಟ್ಟು, ಸುಮಾರು 200 ಜನರನ್ನು ತುರ್ತು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತೀವ್ರ ನಿಗಾ ಘಟಕ (ICU) ಮತ್ತು ಹೈ ಡಿಪೆಂಡೆನ್ಸಿ ಯೂನಿಟ್ (HDU) ಇರುವ ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಸಮಯದಲ್ಲಿ, ಸುಮಾರು 40–50 ರೋಗಿಗಳು ಬೆಂಕಿಪೀಡಿತ ವಾರ್ಡ್ ಗಳಲ್ಲಿದ್ದರು.
ಉತ್ತರ ಪ್ರದೇಶ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡನೇ ಮಹಡಿಯಿಂದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದ ನಂತರ, ತಕ್ಷಣವೇ ರೋಗಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಯಿತು. ಸುಮಾರು 200 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ರೋಗಿಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಪಾಠಕ್ ಹೇಳಿಕೊಂಡರೂ, ಅಧಿಕ ರಕ್ತದೊತ್ತಡ ಸಂಬಂಧಿತ ತೊಂದರೆಗಳೊಂದಿಗೆ ಐಸಿಯುಗೆ ದಾಖಲಾಗಿದ್ದ ರಾಜ್‌ಕುಮಾರ್ ಪ್ರಜಾಪತಿ (61) ಎಂಬ ರೋಗಿ ಬೆಂಕಿಯಿಂದ ಉಂಟಾದ ಆಮ್ಲಜನಕ ಪೂರೈಕೆಯಲ್ಲಿನ ಅಡಚಣೆಯಿಂದ ಮೃತಪಟ್ಟರು.
ಕಾಂತಿ (26) ಎಂಬ ಮತ್ತೊಬ್ಬ ರೋಗಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಲರಾಂಪುರ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ, ಆದರೂ ಅಧಿಕಾರಿಗಳು ಘಟನೆಯ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದಾರೆ.
ರೋಗಿಗಳನ್ನು ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆ ಮತ್ತು ಬಲರಾಂಪುರ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಸ್ಥಳಾಂತರಿಸಲಾಯಿತು. ತೀವ್ರವಾಗಿ ಅಸ್ವಸ್ಥರಾದ ರೋಗಿಗಳನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗಳಿಗೆ ವರ್ಗಾಯಿಸಲಾಯಿತು. ಗರ್ಭಿಣಿಯರನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments