top of page

ವಿಧಾನಸಭೆಯಲ್ಲಿ ಎಸ್‌ಎಂ ಕೃಷ್ಣಗೆ ಶ್ರದ್ಧಾಂಜಲಿ; 'ಸಜ್ಜನ ರಾಜಕಾರಣಿ' ಎಂದು ಶ್ಲಾಘಿಸಿದ ನಾಯಕರು

  • Writer: new waves technology
    new waves technology
  • Dec 10, 2024
  • 1 min read

ಕೃಷ್ಣ ಅವರ ಡ್ರೆಸ್ಸಿಂಗ್ ಸೆನ್ಸ್, ಭಾಷೆಯ ಮೇಲಿನ ಹಿಡಿತ, ಟೆನಿಸ್ ಆಟದ ಮೇಲಿನ ಪ್ರೀತಿ ಬಗ್ಗೆಯೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿ: ಕರ್ನಾಟಕ ವಿಧಾನಸಭೆ ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅಗಲಿದ ನಾಯಕ "ಸಜ್ಜನ ರಾಜಕಾರಣಿ", ಬೆಂಗಳೂರನ್ನು ಐಟಿ ಹಬ್ ಮಾಡುವಲ್ಲಿ ಅವರ ಕೊಡುಗೆ ಅಪಾರ ಎಂದು ಎಂದು ನಾಯಕರು ಶ್ಲಾಘಿಸಿದರು.

ಕೃಷ್ಣ ಅವರ ಡ್ರೆಸ್ಸಿಂಗ್ ಸೆನ್ಸ್, ಭಾಷೆಯ ಮೇಲಿನ ಹಿಡಿತ, ಟೆನಿಸ್ ಆಟದ ಮೇಲಿನ ಪ್ರೀತಿ ಬಗ್ಗೆಯೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಬೆಳಗಿನ ಜಾವ ತಮ್ಮ ನಿವಾಸದಲ್ಲಿ ನಿಧನರಾದ 92 ವರ್ಷ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.


ಇಂದು ಸದನ ಆರಂಭವಾಗುದ್ದಂತೆ, ಸ್ಪೀಕರ್ ಯು ಟಿ ಖಾದರ್ ಅವರು ಸಂತಾಪ ಸೂಚಿಸಿ ಕೃಷ್ಣ ಅವರನ್ನು ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು.

ಕೃಷ್ಣ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ - ಎಲ್ಲಾ ನಾಲ್ಕು ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.

"ಕೃಷ್ಣ ಅವರಿಗೆ ಯಾರ ಮೇಲೂ ದ್ವೇಷ ಇರಲಿಲ್ಲ ಮತ್ತು ಅವರು ನಿರ್ವಹಿಸಿದ ಕಚೇರಿಗೆ ಯಾವಾಗಲೂ ಘನತೆಯನ್ನು ತರುತ್ತಿದ್ದರು. ಅವರ ಜೀವನ ಯುವ ರಾಜಕಾರಣಿಗಳಿಗೆ ಒಂದು ಸಂದೇಶವಾಗಿದೆ. ನಮಗೆ ಉತ್ತಮ ರಾಜಕಾರಣಿಗಳು ಸಿಗಬಹುದು, ಆದರೆ ಅವರಂತಹ ಅತ್ಯುತ್ತಮ ರಾಜಕಾರಣಿ ಸಿಗುವುದು ಕಷ್ಟ" ಎಂದು ಸ್ಪೀಕರ್ ಹೇಳಿದರು.

ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೃಷ್ಣ ಅವರು ಸಜ್ಜನ ರಾಜಕಾರಣಿ ಮತ್ತು ದೂರದೃಷ್ಟಿಯುಳ್ಳವರು ಎಂದು ಹೇಳಿದರು.

ಅಗಲಿದ ನಾಯಕನ ಸುದೀರ್ಘ ರಾಜಕೀಯ ಪಯಣವನ್ನು ಉಲ್ಲೇಖಿಸಿದ ಸಿಎಂ, ಕಾಲೇಜು ದಿನಗಳಲ್ಲಿ ಬಿಎಸ್ಸಿ ಓದುತ್ತಿದ್ದಾಗ ನಾನು ಕೃಷ್ಣ ಅವರ ಅಭಿಮಾನಿಯಾಗಿದ್ದೆ ಮತ್ತು 1968ರ ಲೋಕಸಭೆ ಉಪಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದಾಗ ಅವರನ್ನು ಬೆಂಬಲಿಸಿದ್ದೆ ಎಂದರು.

ಕೃಷ್ಣ ಅವರು ತಮ್ಮನ್ನು ಮನಃಪೂರ್ವಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ, ಅವರು ಉತ್ತಮ ವಾಗ್ಮಿ ಮತ್ತು ಉತ್ತಮ ಸಂಸದೀಯ ಪಟು ಎಂದರು.

"ಅವರು ಎಂದಿಗೂ ಯಾವುದೇ ಸೇಡಿನ ರಾಜಕೀಯದಲ್ಲಿ ತೊಡಗಿಲ್ಲ. ಅವರು ಅಪರೂಪದ ವ್ಯಕ್ತಿತ್ವದ ರಾಜಕಾರಣಿ" ಎಂದು ಸಿಎಂ ಹೇಳಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೆ ಕೃಷ್ಣರನ್ನು ಮರೆಯಲು ಸಾಧ್ಯವಿಲ್ಲ ಎಂದರು.

"ಅವರು(ಕೃಷ್ಣ) ಬೆಂಗಳೂರಿಗೆ ಘನತೆ ಮತ್ತು ಹೆಮ್ಮೆಯನ್ನು ತಂದು ಕೊಟ್ಟರು." ಅವರು ಒಬ್ಬ ನಿಷ್ಕಳಂಕ ರಾಜಕಾರಣಿಯಾಗಿದ್ದು, ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ಬೆಂಗಳೂರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ತಂದುಕೊಟ್ಟ ಕೀರ್ತಿ ಕೃಷ್ಣಾ ಅವರಿಗೆ ಸಲ್ಲುತ್ತದೆ" ಎಂದರು.

Comments


bottom of page