top of page

ಸದನದಲ್ಲಿ ದಾಖಲಾಗಿರುವ ಆಡಿಯೊ, ವಿಡಿಯೊ ಪರಿಶೀಲಿಸಿ ತಪ್ಪಿದ್ದವರಿಗೆ ಶಿಕ್ಷೆಯಾಗಲಿ: ಸಿ ಟಿ ರವಿ

  • Writer: new waves technology
    new waves technology
  • Dec 21, 2024
  • 2 min read

ಪ್ರಕರಣ ಸಂಬಂಧ ಅಂದು ನಡೆದ ಘಟನೆಯೇನು, ಪೊಲೀಸರು ಗುರುವಾರ ಸಂಜೆ ತಮ್ಮನ್ನು ಬಂಧಿಸಿ ನಿನ್ನೆ ಬೆಳಗಿನ ಜಾವದವರೆಗೆ ಏನೇನು ಮಾಡಿದರು ಎಂಬುದನ್ನು ಇಂದು ಸುದ್ದಿಗೋಷ್ಠಿಯಲ್ಲಿ ಸ್ವತಃ ಸಿ ಟಿ ರವಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿಯವರ ಬಂಧನವಾಗಿ ಕೋರ್ಟ್ ಆದೇಶದಂತೆ ಬಿಡುಗಡೆ ಕೂಡ ಆಗಿದೆ.

ಪ್ರಕರಣ ಸಂಬಂಧ ಅಂದು ನಡೆದ ಘಟನೆಯೇನು, ಪೊಲೀಸರು ಗುರುವಾರ ಸಂಜೆ ತಮ್ಮನ್ನು ಬಂಧಿಸಿ ನಿನ್ನೆ ಬೆಳಗಿನ ಜಾವದವರೆಗೆ ಏನೇನು ಮಾಡಿದರು ಎಂಬುದನ್ನು ಇಂದು ಸುದ್ದಿಗೋಷ್ಠಿಯಲ್ಲಿ ಸ್ವತಃ ಸಿ ಟಿ ರವಿ ಎಳೆಎಳೆಯಾಗಿ ಬಿಚ್ಚಿಟ್ಟರು.


ಗುರುವಾರ ಸಂಜೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಬಂದು ನನ್ನನ್ನು ಪ್ರತ್ಯೇಕವಾಗಿ ಬಂಧಿಸಿದರು. ಬಂಧನ ಬಳಿಕ ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ.

ರಾತ್ರಿಯಿಡೀ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು, ಪೊಲೀಸರಿಗೆ ನಾನು ಪದೇ ಪದೇ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಏನೋ ಪಿಸುಪಿಸು ಮಾತನಾಡುತ್ತಿದ್ದರು. ನನ್ನ ತಲೆಗೆ ಪೆಟ್ಟಾಗಿದ್ದರಿಂದ ತಲೆ ಸುತ್ತು ಬಂದಂತೆ, ವಾಂತಿ ಬಂದಂತೆ ಆಗುತ್ತಿತ್ತು.


ಪೊಲೀಸರಿಗೆ ಆಗಾಗ ಕರೆಗಳು ಬರುತ್ತಿತ್ತು. ಯಾರೋ ಮೇಲಿನ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಆದೇಶ ಮಾಡುತ್ತಿದ್ದರು. ನನಗೆ ಕೇಳಿಸಬಾರದು ಅಂತ ದೂರ ಹೋಗಿ ಮಾತನಾಡುತ್ತಿದ್ದರು ಎಂದು ಸಿ ಟಿ ರವಿ ಆರೋಪ ಮಾಡಿದ್ದಾರೆ.

ನನ್ನ ಕೊಲೆಗೆ ಸಂಚು ರೂಪಿಸಿದ್ದರೇ?: ರಾತ್ರಿ ಹೊತ್ತಿನಲ್ಲಿ ಪೊಲೀಸರು ನನಗೆ ಮಾಹಿತಿ ನೀಡದೆ ಸುತ್ತಾಡಿಸಿದ್ದಾರೆ, ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಮನೆಯಿಂದ ನನ್ನ ಪತ್ನಿ ಫೋನ್ ಮಾಡಿದರೆ ನಾನು ಲೈವ್ ಲೊಕೇಶನ್ ಹಾಕಿದ್ದೆ, ನಂತರ ಸ್ವಲ್ಪ ದೂರ ಹೋದ ಮೇಲೆ ಮೊಬೈಲ್ ಸಂಪರ್ಕ ಕಡಿತಗೊಂಡಿತು. ನಮ್ಮ ವಾಹನ ಹಿಂದೆ ನನ್ನ ಪಿ.ಎ ಸಿಬ್ಬಂದಿಯ ವಾಹನವನ್ನು ಸ್ವಲ್ಪ ದೂರ ಹೋದ ಮೇಲೆ ಬ್ಯಾರಿಕೇಡ್ ಹಾಕಿ ತಡೆದರು. ಅಂದರೆ ನನ್ನ ಕೊಲೆಗೆ ಸಂಚು ರೂಪಿಸಿದ್ದರೇ ಎಂಬ ಸಂದೇಹ ಬರುತ್ತಿದೆ ಎಂದರು.


ಇದಕ್ಕೂ ಮುನ್ನ ಮೊನ್ನೆ ಗುರುವಾರ ಅಪರಾಹ್ನ ಸದನದಲ್ಲಿ ಸಭಾಪತಿಯವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ರಾಷ್ಟ್ರಗೀತೆಯನ್ನು ಹಾಡಿ ಎಲ್ಲರೂ ಹೊರಬಂದಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಜೀರ್ ಅಹ್ಮದ್ ಮತ್ತು ಚನ್ನರಾಜ್ ಹಟ್ಟಿಹೊಳಿ ಮೊದಲಾದವರು ನನ್ನ ಮೇಲೆ ಮಾತಿನ ಪ್ರಹಾರ ನಡೆಸಿ, ನಿನ್ನ ಕತೆಯನ್ನು ಮುಗಿಸಿ ಬಿಡುತ್ತೇವೆ ಅಂತ ಏರಿಬಂದರು, ನಾನು ಮಾರ್ಷಲ್ ಗಳ ರಕ್ಷಣೆಯಲ್ಲಿ ಸಭಾಪತಿಗಳ ಕೊಠಡಿಗೆ ಹೋದೆ ಎಂದರು.

ನಾನು ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಬಂದವನು. ಅಧಿಕಾರ ರಾಜಕಾರಣಕ್ಕೆ ಬಂದು 20 ವರ್ಷವಾಗಿದೆ. ಅಧಿಕಾರದ ದುರ್ಬಳಕೆ ಹೇಗೆ ಮಾಡಬೇಕೆಂದು ಕಾಂಗ್ರೆಸ್ ನವರಿಂದ ಕಲಿಯಬೇಕು. ಈ ಘಟನೆಯ ಸತ್ಯಾಸತ್ಯತೆ ಹೊರಬರಬೇಕಿದ್ದರೆ ಪೊಲೀಸರ ವಾಕಿಟಾಕಿ ಮತ್ತು ಖಾಸಗಿ ಫೋನ್ ಗಳನ್ನು ತಪಾಸಣೆ ಮಾಡಬೇಕು. ನಾನು ಎಲ್ಲೆಲ್ಲಿ ಓಡಾಡಿದೆ ಎಂಬುದು ಸಿಡಿಆರ್ ನ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಧಾನ ಮಂಡಲದ ಒಳಗೆ ವಿಷುವಲ್ಸ್, ವಾಯ್ಸ್ ರೆಕಾರ್ಡಿಂಗ್ ಮತ್ತು ಸ್ಟೆನೊ ಅವರು ಅಸಂವಿಧಾನಿಕ ಶಬ್ದವನ್ನು ಸಭಾಧ್ಯಕ್ಷರ ಗಮನಕ್ಕೆ ತಂದು ಕಡತದಿಂದ ಹೊರತೆಗೆಯುತ್ತಾರೆ. ಅವಹೇಳನಕಾರಿಯಾಗಿ ಮಾತನಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ, ಕ್ರಿಮಿನಲ್ ಪ್ರಕರಣವಾಗಿದ್ದರೆ ಸಂಬಂಧಪಟ್ಟವರಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸುವ ಅಧಿಕಾರ ಸಹ ಸಭಾಧ್ಯಕ್ಷರಿಗೆ, ಸಭಾಪತಿಗಳಿಗೆ ಇರುತ್ತದೆ. ಕಾನೂನುಗಳನ್ನು ಕೈ ತೆಗೆದುಕೊಳ್ಳುವ ಅಧಿಕಾರ ಮಂತ್ರಿಗಳಿಗೆ ಕೊಟ್ಟಿಲ್ಲ. ಸದನದಲ್ಲಿ ದಾಖಲಾಗಿರುವ ಆಡಿಯೊ, ವಿಡಿಯೊ ಪರಿಶೀಲಿಸಿ ನನ್ನ ತಪ್ಪಿದ್ದರೆ ನನಗೆ ಶಿಕ್ಷೆಯಾಗಲಿ, ಅವರದ್ದು ತಪ್ಪಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಸಿ ಟಿ ರವಿ ಒತ್ತಾಯಿಸಿದರು.

コメント


bottom of page