top of page

ಹೋಗೋದಾದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ: ಸಂಸದ ಸುಧಾಕರ್​​ ವಿರುದ್ಧ ಶಾಸಕ ಎಸ್‌.ಆರ್‌ ವಿಶ್ವನಾಥ್‌ ಗುಡುಗು!

  • Writer: new waves technology
    new waves technology
  • Jan 31
  • 2 min read

ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತರು? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ದರೆ ಜನ ಯಾಕೆ ನಿಮ್ಮನ್ನ ಸೋಲಿಸುತ್ತಿದ್ದರು?

ಬೆಂಗಳೂರು: ಡಾ.ಕೆ.ಸುಧಾಕರ್ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಕ್ಷದ ಕೆಲ ಮುಖಂಡರು ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದು, ಸಂಸದನ ವಿರುದ್ಧ ಗುಡುಗಿದ್ದಾರೆ.

ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ ಯಲಹಂಕ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್, ಹೋಗುವ ಹಾಗಿದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಕ್ಷ ಶುದ್ಧವಾಗಲಿ, ಹೋಗೋರೆಲ್ಲ ಹೋಗಲಿ ಎಂದು ಕೆಂಡ ಕಾರಿದರು.

ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಹಗುರ ಮಾತಾಡಿರೋದು ನನಗೆ ಹಿಡಿಸಲಿಲ್ಲ. ಈ ಹಿಂದೆಯೂ ನನ್ನ ಬಗ್ಗೆ ಅವರು ಮಾತನಾಡಿದ್ದಾರೆ. ನಾನೇನು ದಡ್ಡ ಅಲ್ಲ, ನನಗೂ ಅರ್ಥ ಆಗುತ್ತೆ. ಅವರಿಂದ ಸರ್ಕಾರ ರಚನೆ ಆಗಿರಬಹುದು, ಆದ್ರೆ 17 ಜನರಲ್ಲಿ ಕೊನೆಯದಾಗಿ ಬಂದವರು ಸುಧಾಕರ್‌. ಅವರ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆದಾಗ ನಾನೇ ಹೋಗಿ ಬಚಾವ್‌ ಮಾಡಿದ್ದೆ.ಸುಧಾಕರ್ ಕೋವಿಡ್ ಪರಿಸ್ಥಿತಿ ನಿರ್ವಹಿಸಿದ್ದರು. ಸಮರ್ಥ ಸಚಿವ ಆಗಿದ್ದವರು.

ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತರು? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ದರೆ ಜನ ಯಾಕೆ ನಿಮ್ಮನ್ನ ಸೋಲಿಸುತ್ತಿದ್ದರು? ಸಂಸದ ಸ್ಥಾನದ ಟಿಕೆಟ್ ಸಿಗಲ್ಲ ಎಂದಾಗ ಏನೇನು ಮಾತಾಡಿದ್ದಿರಿ? ಕಾಂಗ್ರೆಸ್‌ನವರ ಜೊತೆ ಆಗ ನೀವು ಮಾತಾಡಲಿಲ್ಲವಾ? ಆಗ ನಿಮಗೆ ಪಕ್ಷ ನಿಷ್ಠೆ ಇತ್ತಾ? ನೀವು ಕಾಂಗ್ರೆಸ್‌ ಜೊತೆಗೆ ಮಾತಾಡಲಿಲ್ಲ ಎಂದರೆ ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡುತ್ತೇನೆಂದು ಸವಾಲು ಹಾಕಿದರು.


ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಕುರಿತು ಮಾತನಾಡಿ, ಜಿಲ್ಲೆಗೆ ತಲಾ ಮೂರು ಹೆಸರು ಕಳಿಸಲಾಗಿತ್ತು. ಈ ಪೈಕಿ ಸಂದೀಪ್ ರೆಡ್ಡಿ ಆಯ್ಕೆ ಆಗಿದ್ದಾರೆ. ಅವರು ನಿನ್ನ ಬಂಧುವೂ ಅಲ್ಲ, ನನ್ನ ಸಂಬಂಧಿಯೂ ಅಲ್ಲ. ಏನ್ ತೀರ್ಮಾನ ತಗೋತೀರಿ, ಪಕ್ಷ ಬಿಡ್ತೀರಾ? ನಿನಗೆ ತಾಕತ್ತಿದ್ದರೆ ಪಕ್ಷ ಬಿಟ್ಟು ಚುನಾವಣೆ ಎದುರಿಸಿ, ನಮ್ಮ ಬಗ್ಗೆ, ಯಲಹಂಕ ಕಾರ್ಯಕರ್ತರ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡೇಕು. ಅದನ್ನು ಬಿಟ್ಟು ನಮ್ಮ ಕ್ಷೇತ್ರದಲ್ಲಿ ಮುಖಂಡರನ್ನ ಎತ್ತಿ ಕಟ್ಟುವ ಕೆಲಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ವರಿಷ್ಠರ ಬಳಿ ಮಾತಾಡಬೇಕು. 40 ವರ್ಷದಿಂದ ಪಕ್ಷದಲ್ಲಿದ್ದವರು ನಾವು, ನಾವೇ ಮೌನವಾಗಿದ್ದೇವೆ. ಬಾಗೇಪಲ್ಲಿ, ಹೊಸಕೋಟೆ, ದೇವನಹಳ್ಳಿಯಲ್ಲಿ ನೀನು ಕಾಂಗ್ರೆಸ್‌ಪರ ಕೆಲಸಮಾಡಿದ್ದೀಯ. ಬಿಜೆಪಿ ಪಕ್ಷ ತಾಯಿ ಇದ್ದ ಹಾಗೆ. ಇದ್ದರೆ ಪಕ್ಷದಲ್ಲಿ ಇರು, ಇಲ್ಲ ಹೋಗು. ಕಾಂಗ್ರೆಸ್‌ಗೆ ಹೋದ್ರೇ ಸ್ಥಾನಮಾನ ಸಿಕ್ಕಿಬಿಡುತ್ತಾ? ನಿಮ್ಮ ದುರಹಂಕಾರದಿಂದ ಪಕ್ಷ ಅಧಿಕಾರಕ್ಕೆ ಬರದಂತೆ ಮಾಡಿದ್ದು ನೀವು ಎಂದು ಕಿಡಿಕಾರಿದರು.

ಬೇಕಿದ್ದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾನು ಗೆಲ್ಲಿಸಿ ತೋರಿಸುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೀನು ಗೆದ್ದಿದ್ದು ಸುಧಾಕರ್ ಹೆಸರಿಂದಲ್ಲ. ಮೋದಿ ಹೆಸರಿಂದ, ಅದಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದೆ. ನೀನು ಕಾಂಗ್ರೆಸ್‌ನಲ್ಲಿದ್ದಾಗ ನಾವು ಗೆಲ್ಲಲಿಲ್ವಾ ಅಲ್ಲಿ? ಇನ್ನೊಂದು ಚಕಾರ ಎತ್ತಬಾರದು ನೀನು.. ನನ್ನ ತಂಟೆಗೆ ಬರಬೇಡ. ಹೋಗುವ ಹಾಗಿದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಕ್ಷ ಶುದ್ಧವಾಗಲಿ, ಹೋಗೋರೆಲ್ಲ ಹೋಗಲಿ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

Comments


bottom of page