top of page

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಸೀಕ್ರೆಟ್ ಆಪರೇಷನ್: ಇರಾನ್‌ಗೇ ಗೊತ್ತಾಗದಂತೆ 10 ಕೋಟಿ ಬ್ಯಾರೆಲ್ ತೈಲ ಸಾಗಣೆ..!

  • Writer: new waves technology
    new waves technology
  • Jun 11
  • 2 min read
ಕಳೆದ ತಿಂಗಳು ನಾನು ಅಮೆರಿಕದ ಸೇನೆಗೆ ತೈಲ ಟ್ಯಾಂಕರ್‌ಗಳು ಹಾಗೂ ಇತರೆ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸಲು ವಿಶೇಷ ರಹಸ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೆ. ಅದರ ಪರಿಣಾಮವಾಗಿ 200ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ.
ಕಳೆದ ತಿಂಗಳು ನಾನು ಅಮೆರಿಕದ ಸೇನೆಗೆ ತೈಲ ಟ್ಯಾಂಕರ್‌ಗಳು ಹಾಗೂ ಇತರೆ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸಲು ವಿಶೇಷ ರಹಸ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೆ. ಅದರ ಪರಿಣಾಮವಾಗಿ 200ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ.

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಹಾಗೂ ಅಚ್ಚರಿಯ ಹೇಳಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಇರಾನ್‌ಗೆ ತಿಳಿಯದಂತೆ 10 ಕೋಟಿ ಬ್ಯಾರೆಲ್‌ಗಿಂತ ಹೆಚ್ಚು ತೈಲವನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಅಮೆರಿಕ ಸೇನೆ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂದು ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ Truth Socialನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಕಳೆದ ತಿಂಗಳು ನಾನು ಅಮೆರಿಕದ ಸೇನೆಗೆ ತೈಲ ಟ್ಯಾಂಕರ್‌ಗಳು ಹಾಗೂ ಇತರೆ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸಲು ವಿಶೇಷ ರಹಸ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೆ. ಅದರ ಪರಿಣಾಮವಾಗಿ 200ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ. 10 ಕೋಟಿ ಬ್ಯಾರೆಲ್‌ಗಿಂತ ಹೆಚ್ಚು ತೈಲ ಮುಕ್ತ ಮಾರುಕಟ್ಟೆಗೆ ತಲುಪಿದೆ ಎಂದು ಹೇಳಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಈ ಕಾರ್ಯಾಚರಣೆ ಬಗ್ಗೆ ಇರಾನ್‌ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈಗ ನಾನು ಈ ವಿಚಾರವನ್ನು ಬಹಿರಂಗಪಡಿಸಬಹುದು. ನಾವು ಲಕ್ಷಾಂತರ ಬ್ಯಾರೆಲ್ ತೈಲವನ್ನು ಹೊರಗೆ ಸಾಗಿಸಿದ್ದೇವೆ. ಆದರೆ, ಅದನ್ನು ಯಾರೂ ಗಮನಿಸಿಲ್ಲ. ವಿಶೇಷವಾಗಿ ಇರಾನ್‌ಗೆ ಅದರ ಸುಳಿವೂ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ರಾತ್ರಿ ವೇಳೆ ದೀಪಗಳನ್ನು ಬಳಸದೇ 22 ಹಡಗುಗಳನ್ನು ಸುರಕ್ಷಿತವಾಗಿ ಸಾಗಿಸಲಾಯಿತು. ಅವರ ರಾಡಾರ್ ವ್ಯವಸ್ಥೆಗಳನ್ನು ನಾವು ನಿಷ್ಕ್ರಿಯಗೊಳಿಸಿದ್ದೆವು" ಎಂದು ಹೇಳಿದ್ದಾರೆ.

ಈ ರಹಸ್ಯ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹಾಗೂ ಕಚ್ಚಾತೈಲದ ಬೆಲೆ ನಿಯಂತ್ರಣದಲ್ಲಿಡುವುದು ಎಂದು ತಿಳಿಸಿದ್ದಾರೆ.

"ಈ ಕ್ರಮದಿಂದ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕಡಿಮೆಯಲ್ಲೇ ಉಳಿದಿದೆ. ಇಲ್ಲದಿದ್ದರೆ ಅದು 200 ಡಾಲರ್‌ವರೆಗೂ ಏರಬಹುದಾಗಿತ್ತು. ಅಮೆರಿಕದ ಸೇನೆ ಹಾಗೂ ನೌಕಾಪಡೆಯ ಕಾರ್ಯಾಚರಣೆಯಿಂದ ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರವಾಗಿರಲು ನೆರವಾಗಿದೆ" ಎಂದಿದ್ದಾರೆ.

Strait of Hormuz ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಜಲಸಂಧಿಯ ಮೂಲಕ ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು 20 ಪ್ರತಿಶತ ಸಾಗುತ್ತದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಬಳಿಕ ಫೆಬ್ರವರಿ 28ರಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ನೌಕಾ ಸಂಚಾರದ ಮೇಲೆ ನಿರ್ಬಂಧ ಹೇರಿರುವುದಾಗಿ ಘೋಷಿಸಿತ್ತು. ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ಅಮೆರಿಕವು ಮೇ ತಿಂಗಳ ಆರಂಭದಲ್ಲಿ "ಪ್ರಾಜೆಕ್ಟ್ ಫ್ರೀಡಮ್" ಹೆಸರಿನ ಕಾರ್ಯಾಚರಣೆಯಡಿ ಹಡಗುಗಳಿಗೆ ಭದ್ರತಾ ನೆರವು ನೀಡಲು ಯೋಜಿಸಿತ್ತು ಎಂಬ ವರದಿಗಳು ಹೊರಬಿದ್ದಿದ್ದವು. ಆದರೆ, ಬಳಿಕ ಆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ನಂತರ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ ಎಂಬ ವರದಿಗಳು ಪ್ರಕಟವಾದರೂ, ಅಮೆರಿಕದ ಸೆಂಟ್ರಲ್ ಕಮಾಂಡ್ ಅದನ್ನು ಅಧಿಕೃತವಾಗಿ ನಿರಾಕರಿಸಿತ್ತು.

ಈಗ ಟ್ರಂಪ್ ಸ್ವತಃ ರಹಸ್ಯ ಕಾರ್ಯಾಚರಣೆ ನಡೆದಿರುವುದಾಗಿ ಹೇಳಿರುವುದು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇರಾನ್ ಈ ಹೇಳಿಕೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಮತ್ತು ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಇದರ ಪರಿಣಾಮ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಟ್ರಂಪ್ ಅವರ ಹೇಳಿಕೆ ಸತ್ಯವಾಗಿದ್ದರೆ, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನಡೆಸಿದ ಅತ್ಯಂತ ದೊಡ್ಡ ರಹಸ್ಯ ಸಮುದ್ರ ಕಾರ್ಯಾಚರಣೆಗಳಲ್ಲಿ ಇದೂ ಒಂದಾಗಬಹುದು. ಆದರೆ, ಈ ಕುರಿತು ಅಮೆರಿಕದ ರಕ್ಷಣಾ ಇಲಾಖೆ ಅಥವಾ ಸೇನೆಯಿಂದ ಇನ್ನೂ ಅಧಿಕೃತ ವಿವರಗಳು ಪ್ರಕಟವಾಗಿಲ್ಲ. ಹೀಗಾಗಿ ಟ್ರಂಪ್ ಅವರ ಹೇಳಿಕೆಗಳ ಸತ್ಯಾಸತ್ಯತೆ ಮತ್ತು ಕಾರ್ಯಾಚರಣೆಯ ವ್ಯಾಪ್ತಿ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.

Comments


bottom of page