ಹೊಸದಾಗಿ ಜಾತಿ ಗಣತಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಿಸುವ ಪಿತೂರಿ: ಶೋಭಾ ಕರಂದ್ಲಾಜೆ
- new waves technology
- Jun 12
- 1 min read
ಸಿದ್ದರಾಮಯ್ಯ ಸರ್ಕಾರದ ಜಾತಿ ಗಣತಿ ಮರು ಸಮೀಕ್ಷೆಯ ಹಿಂದೆ ಒಂದು ಅಂಶದ ಕಾರ್ಯಸೂಚಿ ಇದೆ. ಅದು ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದೆ ಎಂದು ತೋರಿಸುವುದು.

ಮಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಜಾತಿ ಗಣತಿ ನಡೆಸುವ ಮೂಲಕ ಅಲ್ಪಸಂಖ್ಯಾತರ ಮೀಸಲಾತಿಯನ್ನು ಹೆಚ್ಚಿಸಲು ಪಿತೂರಿ ನಡೆಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ಆರೋಪಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ಸಿದ್ದರಾಮಯ್ಯ ಸರ್ಕಾರದ ಜಾತಿ ಗಣತಿ ಮರು ಸಮೀಕ್ಷೆಯ ಹಿಂದೆ ಒಂದು ಅಂಶದ ಕಾರ್ಯಸೂಚಿ ಇದೆ. ಅದು ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದೆ ಎಂದು ತೋರಿಸುವುದು ಮತ್ತು ಆ ಮೂಲಕ ಅವರಿಗೆ ಮೀಸಲಾತಿಯನ್ನು ಹೆಚ್ಚಿಸುವುದು ಎಂದಿದ್ದಾರೆ.
ಇದಲ್ಲದೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಅವರು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸಲು ಯತ್ನಿಸುತ್ತಾರೆ. ಹೊಸದಾಗಿ ಜಾತಿ ಗಣತಿ ನಡೆಸುವ ಮೂಲಕ ಜನರನ್ನು ಮತ್ತಷ್ಟು ವಿಭಜಿಸುವ ಉದ್ದೇಶ ಹೊಂದಿದೆ. ಆದರೆ ರಾಜ್ಯದ ಜನ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ವಿರೋಧದ ಹೊರತಾಗಿಯೂ ಜಾತಿ ಗಣತಿ ವರದಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ದೃಢವಾಗಿ ಹೇಳಿರುವುದನ್ನು ಪ್ರಶ್ನಿಸಿದ ಕೇಂದ್ರ ಸಚಿವೆ. "ಕಳೆದ 10 ವರ್ಷಗಳ ಇದಕ್ಕಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡಲಾಗಿದೆ. ಎರಡು ಆಯೋಗಗಳನ್ನು ನೇಮಿಸಲಾಗಿದೆ" ಎಂದು ವಾಗ್ದಾಳಿ ನಡೆಸಿದರು.
90 ದಿನಗಳಲ್ಲಿ ಜಾತಿ ಗಣತಿ ಮರು ಸಮೀಕ್ಷೆ ಪೂರ್ಣಗೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಎಸಿ ಕೊಠಡಿಗಳಲ್ಲಿ ಕುಳಿತು ಜಾತಿಗಳ ಸಂಖ್ಯೆಯನ್ನು ಬರೆಯಲಾಗುತ್ತದೆಯೇ ಎಂದು ಪ್ರಶ್ನಿಸಿದರು.
"ಜಯಪ್ರಕಾಶ್ ಹೆಗ್ಡೆ ಆಯೋಗ, ನಿಮ್ಮ ಜಾತಿಯನ್ನು ಪರಿಶೀಲಿಸಲು ನಿಮ್ಮ ಮನೆ ಭೇಟಿ ನೀಡಿದೆಯೇ?" ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಜಾತಿ ಗಣತಿ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಟೀಕಿಸಿದರು.
留言