top of page

2028 ಕ್ಕೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ: ಬಿಜೆಪಿಯವರನ್ನು ಹೆಗಲ ಮೇಲೆ ಹಾಕಿಕೊಂಡು ಹೊರೋಣ; ಡಿ.ಕೆ.ಶಿ ವ್ಯಂಗ್ಯ

  • Writer: new waves technology
    new waves technology
  • Jun 17
  • 2 min read

ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅನೇಕ ರೈಲ್ವೇ ನಿಲ್ದಾಣಗಳಲ್ಲಿ ಕಾಲ್ತುಳಿತ, ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನೂರಾರು ಜನ ಕಾಲ್ತುಳಿತಕ್ಕೆ ಒಳಗಾಗಿ ಸತ್ತರು. ಇದಕ್ಕೆಲ್ಲಾ ಯಾರು ಹೊಣೆ?

ಬೆಂಗಳೂರು: ಕಾಲ್ತುಳಿತ ಪ್ರಕರಣದಲ್ಲಿ ನಮ್ಮನ್ನು ಟೀಕೆ ಮಾಡುತ್ತಿರುವ ಬಿಜೆಪಿಯವರನ್ನೂ ಹೊರೋಣ. ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಹೊಣೆಯನ್ನು ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಹೊಣೆ ಹೊರಬೇಕು ಎಂದು ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು. ರಾಜ್ಯ ಮಾಲಿನ್ಯ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ವಿಧಾನಸೌಧದ ಎದುರು ಚಾಲನೆ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅನೇಕ ರೈಲ್ವೇ ನಿಲ್ದಾಣಗಳಲ್ಲಿ ಕಾಲ್ತುಳಿತ, ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನೂರಾರು ಜನ ಕಾಲ್ತುಳಿತಕ್ಕೆ ಒಳಗಾಗಿ ಸತ್ತರು. ಇದಕ್ಕೆಲ್ಲಾ ಯಾರು ಹೊಣೆ? ಎರಡು ದಿನದ ಹಿಂದೆ ನಾನು ಅಹಮದಾಬಾದ್ ಗೆ ಹೋಗಿದ್ದೆ. ನಾನೇನಾದರು ಆ ಘಟನೆ ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿ ಮಾಡಿ ಮಾತನಾಡಿದ್ದೇನೆಯೇ?" ಎಂದು ಖಡಕ್ಕಾಗಿ ಉತ್ತರಿಸಿದರು.

ಅವರು ಇರುವುದೇ ಹೆಣದ ಮೇಲೆ ರಾಜಕೀಯ ಮಾಡಲು. ಅವರು ಎಲ್ಲಾ ಕಾಲದಿಂದಲೂ ಅದೇ ಕೆಲಸ ಮಾಡುತ್ತಿದ್ದಾರೆ. ಬಂದ್ ವೇಳೆಯಲ್ಲಿ, ಗಂಗಾಧರ್ ಕೊಲೆ ಪ್ರಕರಣ ಸೇರಿದಂತೆ ಬೇಕಾದಷ್ಟು ಸಮಯದಲ್ಲಿ ಇದೇ ರೀತಿ ಮಾಡಿದ್ದಾರೆ" ಎಂದು ತಿರುಗೇಟು ನೀಡಿದರು.

ಕಾಲ್ತುಳಿತ ಪ್ರಕರಣದಲ್ಲಿ ಯಾರ್ಯಾರಿಗೆ ಶಿಕ್ಷೆ ಕೊಡಬೇಕೋ ಆ ಕೆಲಸವನ್ನು ಸರ್ಕಾರ ಮಾಡಿದೆ. ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ಸಹ ನೇಮಕ ಮಾಡಲಾಗಿದೆ. ಇಡೀ ದೇಶದಲ್ಲಿ ನೂರಾರು ಘಟನೆಗಳು ನಡೆದಿವೆ. ಆದರೂ ಕಾಂಗ್ರೆಸ್ ಪಕ್ಷ ಎಂದಿಗೂ ಹೆಣದ ಮೇಲೆ ರಾಜಕೀಯ ಮಾಡಿಲ್ಲ ಎಂದು ಹೇಳಿದರು.

ಅವರ ರಾಜಕೀಯ ತಳಹದಿ ಹಾಳಾಗಿರುವ ಕಾರಣಕ್ಕೆ ಈ ರೀತಿಯ ಆಪಾದನೆಗಳನ್ನು ಮಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಇನ್ನೂ ಇದೇ ಎಂದು ತೋರಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಅವರ ಜೊತೆಯಿಲ್ಲ" ಎಂದು ಲೇವಡಿ ಮಾಡಿದರು.

ಬಿಜೆಪಿ ಕೇವಲ ಶಿವಕುಮಾರ್ ಅವರನ್ನು ಮಾತ್ರ ಗುರಿ ಮಾಡುತ್ತಿದೆಯೇ ಎಂದು ಕೇಳಿದಾಗ, "ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ. ಕಡಿಮೆ ಬಲ ಇದ್ದರೆ ಕಡಿಮೆ ಶತ್ರುಗಳು, ಬಲವೇ ಇಲ್ಲದಿದ್ದರೇ ಶತ್ರುಗಳೇ ಇಲ್ಲ. ಅವರಿಗೆ ನಮ್ಮನ್ನು ಕಂಡರೆ ಭಯ. ನೀವು (ಮಾಧ್ಯಮಗಳು) ನಮ್ಮ ಜೊತೆ ಇದ್ದರೆ 2028 ಕ್ಕೆ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ" ಎಂದರು. ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವಿರಾ ಎಂದಾಗ, "ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕಾರ ಮಾಡುತ್ತದೆ" ಎಂದು ಹೇಳಿದರು.

ಕಸದ ಮಾಫಿಯಾಕ್ಕೆ ಹೆದರುವುದಿಲ್ಲ; ಹೊಸಬರಿಗೆ ಅವಕಾಶ

ಕಸ ವಿಲೇವಾರಿ ಮರು ಟೆಂಡರ್ ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಬಗ್ಗೆ ಕೇಳಿದಾಗ, ನಗರವನ್ನು ಸ್ವಚ್ಚ ಮಾಡಲಿಲ್ಲ ಎಂದರೆ ಹೇಗೆ? ಈ ತೀರ್ಪಿನ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ. ಈ ಮೊದಲು 89 ಟೆಂಡರ್ ಗಳಾಗಿದ್ದವು. ಅವರೆಲ್ಲರು ಸೇರಿ ತಮ್ಮದೇ ಗುಂಪು ಮಾಡಿಕೊಂಡಿದ್ದಾರೆ. ಇದೊಂದು ಮಾಫಿಯಾ. ಇವರುಗಳು ನಮ್ಮ ದಾರಿ ತಪ್ಪಿಸುತ್ತೇವೆ ಎಂದು ಕೊಂಡಿದ್ದಾರೆ. ಇದರ ಬಗ್ಗೆ ನ್ಯಾಯಾಲಯಕ್ಕೆ ಅರ್ಥ ಮಾಡಿಸುವ ಕೆಲಸ ಮಾಡುತ್ತೇವೆ" ಎಂದರು.

"ಏನೇ ಕೆಲಸ ಮಾಡಲು ಹೋದರು ಪಿಐಎಲ್ ಹಾಕುವುದು ತಡೆಯಾಜ್ಞೆ ತರುವುದು ಹೀಗೆ ಬೆದರಿಕೆ ತಂತ್ರಗಳನ್ನು ಒಂದಷ್ಟು ಗುಂಪು ಮಾಡುತ್ತಿದೆ. ಈ ಸರ್ಕಾರದಲ್ಲಿ ಇದೆಲ್ಲವೂ ನಡೆಯುವುದಿಲ್ಲ. ಹಳಬರನ್ನು ಕಿತ್ತು ಬಿಸಾಕಿ ಹೊಸಬರಿಗೆ ಅವಕಾಶ ನೀಡಲಾಗುವುದು" ಎಂದರು.

Comentários


bottom of page