top of page

5 ವರ್ಷಗಳ ನಂತರ ಭಾರತ-ಚೀನಾ ನಡುವೆ ನೇರ ವಿಮಾನ ಸೇವೆ ಪುನರಾರಂಭ!

  • Writer: new waves technology
    new waves technology
  • Jan 28
  • 1 min read

ಚೀನಾದ ವಿದೇಶಾಂಗ ಕಾರ್ಯದರ್ಶಿ- ಉಪ ವಿದೇಶಾಂಗ ಸಚಿವರನ್ನು ಬೀಜಿಂಗ್ ನಲ್ಲಿ ಭೇಟಿ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿಸ್ತೃತ ಚರ್ಚೆ ನಡೆಸಿದರು.

ನವದೆಹಲಿ: ಕೊವಿಡ್ ಮಹಾಮಾರಿ ಸ್ಫೋಟದ ಬಳಿಕ ಭಾರತ ಮತ್ತು ಚೀನಾ ನಡುವೆ ಸ್ಥಗಿತವಾಗಿದ್ದ ನೇರ ವಿಮಾನ ಸೇವೆಗಳನ್ನು ಪುನಾರಂಭಿಸಲು ಇದೀಗ ಭಾರತ ಮತ್ತು ಚೀನಾ ಸರ್ಕಾರಗಳು ಒಪ್ಪಿಗೆ ನೀಡಿವೆ.

ಹೌದು.. ಕೊರೋನಾ ವೈರಸ್ ಮತ್ತು ನಂತರದ ರಾಜಕೀಯ ಉದ್ವಿಗ್ನತೆಗಳಿಂದಾಗಿ ಸ್ಥಗಿತವಾಗಿದ್ದ ನೇರವಿಮಾನ ಸೇವೆಗಳನ್ನು ಐದು ವರ್ಷಗಳ ನಂತರ ಪುನಾರಂಭಗೊಳಿಸಲು ಭಾರತ ಮತ್ತು ಚೀನಾ ಎರಡೂ ದೇಶಗಳು ಒಪ್ಪಿಗೆ ನೀಡಿವೆ. ಪ್ರಸಕ್ತ ವರ್ಷದ ಬೇಸಿಗೆಯಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಪರಸ್ಪರ ಒಪ್ಪಿಕೊಂಡಿವೆ ಎನ್ನಲಾಗಿದೆ.

ಚೀನಾದ ವಿದೇಶಾಂಗ ಕಾರ್ಯದರ್ಶಿ- ಉಪ ವಿದೇಶಾಂಗ ಸಚಿವರನ್ನು ಬೀಜಿಂಗ್ ನಲ್ಲಿ ಭೇಟಿ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿಸ್ತೃತ ಚರ್ಚೆ ನಡೆಸಿದರು. ಈ ಕುರಿತು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಹಾಲಿ ಇರುವ ಒಪ್ಪಂದಗಳ ಅನ್ವಯ ಇದಕ್ಕೆ ಅಗತ್ಯವಾಗಿರುವ ಸೂಕ್ತ ವ್ಯವಸ್ಥೆಯನ್ನು ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಜತೆಗೆ ಉಭಯ ದೇಶಗಳ ನಡುವೆ ನೇರ ವಿಮಾನಗಳನ್ನು ಪುನರಾರಂಭಿಸುವ ಬಗ್ಗೆಯೂ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


ಕಳೆದ ಅಕ್ಟೋಬರ್ ನಲ್ಲಿ ಕಝನ್ ನಲ್ಲಿ ನಡೆದ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರು ಒಪ್ಪಿಕೊಂಡ ಮೇರೆಗೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಚರ್ಚೆ ನಡೆಯಿತು. ಸಂಬಂಧವನ್ನು ಸ್ಥಿರಗೊಳಿಸಲು ಮತ್ತು ಮರು ನಿರ್ಮಿಸಲು ನಿರ್ದಿಷ್ಟ ಜನಕೇಂದ್ರಿತ ಹೆಜ್ಜೆಗ ಬಗ್ಗೆಯೂ ಉಭಯ ದೇಶಗಳು ಒಪ್ಪಿಕೊಂಡಿವೆ.

ಬೇಸಿಗೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ

ಇದೇ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆಯ ಪುನಾರಂಭ ಈ ನಿಟ್ಟಿನಲ್ಲೂ ಉಭಯ ದೇಶಗಳು ದೊಡ್ಡ ಹೆಜ್ಜೆ ಇಟ್ಟಿದ್ದು, ಟಿಬೇಟ್ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯನ್ನು 2020ರ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಯಾತ್ರೆ ಪುನಾರಂಭದ ಸಂಬಂಧ ಒಪ್ಪಂದ ನವೀಕರಣಗೊಂಡಿರಲಿಲ್ಲ. ಇದೀಗ ಈ ವರ್ಷದ ಬೇಸಿಗೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಎರಡು ದಕ್ಷಿಣ ಏಷ್ಯಾದ ದೇಶಗಳು ನಿರ್ಧರಿಸಿವೆ.

Comments


bottom of page