Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ, ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ
- new waves technology
- Jun 12
- 1 min read
ಅತ್ತ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ಮುಂಬೈ: ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗುತ್ತಲೇ ಇತ್ತ ಆ ಸಂಸ್ಥೆಗೆ ಸಂಬಂಧಿಸಿದ ಷೇರುಗಳೂ ಕೂಡ ತಲ್ಲಣಿಸಿದೆ.
ಹೌದು.. ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಏರ್ಪೋರ್ಟ್ ಬಳಿ ಮೇಧಿನಿ ನಗರ್ನಲ್ಲಿ ಈ ಘಟನೆ ಸಂಭವಿಸಿದ್ದು ಬೋಯಿಂಗ್ 787-8 (AI-171)ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು ಎನ್ನಲಾಗಿದೆ.
ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲೆ ಬಿದ್ದಿದೆ.
ತಲ್ಲಣಿಸಿದ ಷೇರುಮಾರುಕಟ್ಟೆ
ಇನ್ನು ಅತ್ತ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಏರ್ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ ಬೋಯಿಂಗ್ ಸಂಸ್ಥೆಯ ಷೇರುಮೌಲ್ಯ ಬರೊಬ್ಬರಿ ಶೇ.8ರಷ್ಟು ಕುಸಿತ ಕಂಡಿತ್ತು.
ಬಳಿಕ ದಿನದ ವಹಿವಾಟು ಅಂತ್ಯದ ವೇಳೆಗೆ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಂಡು ಶೇ.0.85ರಷ್ಟು ಮೌಲ್ಯ ಕುಸಿತವಾಗಿದೆ. ಬೋಯಿಂಗ್ ಮಾತ್ರವಲ್ಲದೇ ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳ ಷೇರು ಮೌಲ್ಯ ಕೂಡ ಶೇ.3ರಷ್ಟು ಕುಸಿತವಾಗಿದ್ದವು. ಈ ಪೈಕಿ ಇಂಡಿಗೋ ಸಂಸ್ಥೆಯ ಷೇರು ಮೌಲ್ಯ 3.7ರಷ್ಟು ಕುಸಿದಿದ್ದರೆ, ಸ್ಪೈಸ್ ಜೆಟ್ ಷೇರುಗಳ ಮೌಲ್ಯ 2.6ರಷ್ಟು ಕುಸಿದಿದೆ ಎನ್ನಲಾಗಿದೆ.
ಭಾರತೀಯ ಷೇರುಮಾರುಕಟ್ಟೆ ಮೇಲೂ ಪರಿಣಾಮ
ಇನ್ನು ವಿಮಾನ ದುರಂತ ಭಾರತೀಯ ಷೇರುಮಾರುಕಟ್ಟೆ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದು, ಗುರುವಾರ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.00ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.01ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 823.16 ಅಂಕಗಳ ಇಳಿಕೆಯೊಂದಿಗೆ 81,691.98 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 253.20 ಅಂಕಗಳ ಇಳಿಕೆಯೊಂದಿಗೆ 24,888.20 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು, ವಿಮಾನ ಯಾನ ಮತ್ತು ಕೈಗಾರಿಕಾ ವಲಯಗಳ ಷೇರುಗಳು ಸೇರಿದಂತೆ ಎಲ್ಲ ವಲಯಗಳ ಷೇರುಗಳ ಮೌಲ್ಯ ಕುಸಿತವಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಅಪೋಲೋ ಆಸ್ಪತ್ರೆಗಳು, ಡಾ. ರೆಡ್ಡೀಸ್ ಲ್ಯಾಬ್ಸ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಟಾಟಾ ಮೋಟಾರ್ಸ್, ಶ್ರೀರಾಮ್ ಫೈನಾನ್ಸ್, ಟ್ರೆಂಟ್, ಟೈಟಾನ್ ಕಂಪನಿ, ಕೋಲ್ ಇಂಡಿಯಾ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
Comments