Champions Trophy: ಭಾರತ ಒಂದೇ ಅಲ್ಲ, ಕೆಲವು ಕಾರಣಗಳಿಂದ ಐಸಿಸಿ ಟೂರ್ನಮೆಂಟ್ ಆಡಲು ಒಪ್ಪದ ದೇಶಗಳಿವು!
- new waves technology
- Nov 19, 2024
- 2 min read
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಟೂರ್ನಮೆಂಟ್ಗಳು ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಆಯೋಜಿಸುವ ಜವಾಬ್ದಾರಿ ಕಾಲಾನುಕೃಮದಲ್ಲಿ ಬರುತ್ತದೆ. ಇದೀಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್ ತಂಡವನ್ನು ಟ್ರೋಫಿಗೆ ಕಳುಹಿಸಲು ನಿರಾಕರಿಸಿದೆ.

ಭದ್ರತಾ ಕಾರಣಗಳಿಂದಾಗಿ (Security Reason) ಮಂಡಳಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಹೇಳಿದೆ. ವರದಿಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮೋಡ್ನಲ್ಲಿ ನಡೆಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅಯೋಜನೆ ಸ್ಥಳ ಬದಲಾಗಬಹುದು. ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ, ಅನೇಕ ತಂಡಗಳು ಮತ್ತೊಂದು ದೇಶದಲ್ಲಿ ಐಸಿಸಿ ಪಂದ್ಯಾವಳಿಯನ್ನು ಆಡಲು ನಿರಾಕರಿಸಿದ ಉದಾಹರಣೆಗಳಿವೆ. ಯಾವ ದೇಶಗಳು ಯಾವ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿವೆ ಮತ್ತು ಅದರಿಂದ ಏನಾಗಿದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
1996 ವಿಶ್ವಕಪ್; ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್
1996 ರ ಏಕದಿನ ವಿಶ್ವಕಪ್ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಆತಿಥ್ಯ ವಹಿಸಿದ್ದವು. ಈ ಗುಂಪು ಹಂತದ ನಾಲ್ಕು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಕೀನ್ಯಾ ವಿರುದ್ಧ ಪಂದ್ಯಗಳು ಅಲ್ಲಿ ನಡೆಯಬೇಕಿತ್ತು. ಆದರೆ ಜನವರಿ 31 ರಂದು, ಪಂದ್ಯಾವಳಿಗೆ 14 ದಿನಗಳ ಮೊದಲು, ಕೊಲಂಬೊದ ಸೆಂಟ್ರಲ್ ಬ್ಯಾಂಕಿನಲ್ಲಿ ಬಾಂಬ್ ಸ್ಫೋಟಿಸಿತ್ತು. ಘಟನೆಯಲ್ಲಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸುರಕ್ಷತಾ ಕಾರಣಗಳಿಂದಾಗಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶ್ರೀಲಂಕಾಕ್ಕೆ ಪ್ರಯಾಣಿಸಲು ನಿರಾಕರಿಸಿದವು. ಅವರಿಗೆ ಮ್ಯಾಚ್ ಪಾಯಿಂಟ್ ಗಳನ್ನು ನೀಡಬೇಕೆಂದು ಅವು ಒತ್ತಾಯಿಸಿದ್ದವು.
ಆದರೆ, ಶ್ರೀಲಂಕಾ ಮಂಡಳಿ ಇದನ್ನು ವಿರೋಧಿಸಿತ್ತು. ಐಸಿಸಿ ಅಂಕಗಳನ್ನು ವಿಭಜಿಸಲು ಪ್ರಸ್ತಾಪಿಸಿತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದಕ್ಕೆ ನಿರಾಕರಿಸಿತ್ತು. ಮತದಾನ ನಡೆದ ನಂತರ ಐಸಿಸಿ ಗೆದ್ದಿತು. ಆದರೆ ಆಗಲೂ ಶ್ರೀಲಂಕಾ ಈ ಪ್ರಸ್ತಾಪವನ್ನು ಒಪ್ಪಲಿಲ್ಲ. ತಮ್ಮ ದೇಶದಲ್ಲಿ ಆಡದ ಪಂದ್ಯಗಳಿಗೆ ತಲಾ 2 ಅಂಕಗಳನ್ನು ನೀಡಬೇಕು ಎಂಬ ಬೇಡಿಕೆಯೊಂದಿಗೆ ಮರು ಮತದಾನಕ್ಕೆ ಅದು ಒತ್ತಾಯಿಸಿತು. ಈ ಬಾರಿ ಸವಾಲನ್ನ ಗೆದ್ದ ಶ್ರೀಲಂಕಾ, ರದ್ದಾದ ಎರಡು ಪಂದ್ಯಗಳಿಗೆ ಒಟ್ಟು 4 ಅಂಕಗಳನ್ನು ಗಳಿಸಿಕೊಂಡಿತು. ಲಂಕಾ ತಂಡ ಟೂರ್ನಮೆಂಟ್ನಲ್ಲಿ ಫೈನಲ್ ತಲುಪಿತು. ಅವರು ಪಾಕಿಸ್ತಾನದ ಲಾಹೋರ್ ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು.
ಇದನ್ನು : ಅಂದು ರೋಹಿತ್ ಶರ್ಮಾ, ಇಂದು ಸ್ಯಾಮ್ಸನ್! ಜರ್ಸಿ ನಂಬರ್ ಬದಲಾಯಿಸ್ತಿದ್ದಂತೆ ಖುಲಾಯಿಸಿದ ಅದೃಷ್ಟ!
2003 ರ ವಿಶ್ವಕಪ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್
1996 ರ ವಿಶ್ವಕಪ್ ನಂತೆಯೇ 2003 ರ ವಿಶ್ವಕಪ್ ನಲ್ಲಿಯೂ ಇದೇ ರೀತಿ ಘಟನೆ ನಡೆದಿತ್ತು. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಜಂಟಿಯಾಗಿ ಪಂದ್ಯಾವಳಿಯ ಆತಿಥ್ಯ ವಹಿಸಿದ್ದವು. ಆದರೆ ಆ ಸಮಯದಲ್ಲಿ ಜಿಂಬಾಬ್ವೆಯಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿತು. ಹರಾರೆಯಲ್ಲಿ ಆಡಲು ಇಂಗ್ಲೆಂಡ್ ತಂಡ ನಿರಾಕರಿಸಿತು. ಇದಕ್ಕಾಗಿ ಇಂಗ್ಲಿಷ್ ತಂಡವು ಬೆಲೆ ತೆರಬೇಕಾಯಿತು. ಪಂದ್ಯ ರದ್ದಾಗಿದ್ದರಿಂದ ಜಿಂಬಾಬ್ವೆಗೆ ಪೂರ್ಣ ಅಂಕಗಳನ್ನು ನೀಡಲಾಯಿತು. ಗುಂಪು ಹಂತದಲ್ಲಿ, ಜಿಂಬಾಬ್ವೆ ತಂಡವು ಒಟ್ಟು 14 ಅಂಕಗಳನ್ನು ಗಳಿಸಿ ಸೂಪರ್ ಸಿಕ್ಸ್ಗೆ ಅರ್ಹತೆ ಪಡೆಯಿತು. ಮತ್ತೊಂದೆಡೆ, ಇಂಗ್ಲೆಂಡ್ ಕೇವಲ 12 ಅಂಕಗಳೊಂದಿಗೆ ಪಂದ್ಯಾವಳಿಯಿಂದ ಹೊರಬಿದ್ದಿತು.
ಇದೇ ಪಂದ್ಯಾವಳಿಯಲ್ಲಿ ಭದ್ರತಾ ಕಾರಣಗಳಿಂದಾಗಿ ನೈರೋಬಿಯಲ್ಲಿ ಕೀನ್ಯಾ ವಿರುದ್ಧ ಆಡಲು ನ್ಯೂಜಿಲೆಂಡ್ ನಿರಾಕರಿಸಿತು. ಈ ಪಂದ್ಯದಲ್ಲಿ ಕೀನ್ಯಾ ಕೂಡ ಅಂಕಗಳನ್ನು ಗಳಿಸಿಕೊಂಡಿತು. ಆದರೂ, ನ್ಯೂಜಿಲೆಂಡ್ ಸೂಪರ್ ಸಿಕ್ಸ್ಗೆ ಅರ್ಹತೆ ಪಡೆಯಿತು. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತು ಅದೇ ಕೊನೆಯ ಬಾರಿಗೆ ಕೀನ್ಯಾ ಸೂಪರ್ ಸಿಕ್ಸ್ಗೆ ಅರ್ಹತೆ ಪಡೆದುಕೊಂಡಿತ್ತು.
2009 ಟಿ 20 ವಿಶ್ವಕಪ್, ಜಿಂಬಾಬ್ವೆ ತಂಡ
2009 ಇಂಗ್ಲೆಂಡ್ 2009 ಟಿ 20 ವಿಶ್ವಕಪ್ಗೆ ಆತಿಥ್ಯ ವಹಿಸಿತ್ತು. ಆದರೆ ಜಿಂಬಾಬ್ವೆ ಕ್ರಿಕೆಟಿಗರಿಗೆ ವೀಸಾ ನೀಡಲು ಯುಕೆ ಸರ್ಕಾರ ನಿರಾಕರಿಸಿತು. ಜಿಂಬಾಬ್ವೆ ಪಂದ್ಯಾವಳಿಯಲ್ಲಿ ಆಡಲು ನಿರಾಕರಿಸಿತು. ಇದರ ಪರಿಣಾಮವಾಗಿ, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಂತರ ಮೂರನೇ ಅಸೋಸಿಯೇಟ್ ದೇಶವಾಗಿರುವ ಸ್ಕಾಟ್ಲೆಂಡ್ ಪಂದ್ಯಾವಳಿಗೆ ಅರ್ಹತೆ ಪಡೆದವು.
1982 ವಿಶ್ವಕಪ್ನಲ್ಲಿ ವಿಂಡೀಸ್ ಮಹಿಳಾ ತಂಡ ಭಹಿಷ್ಕಾರ
1982 ರಲ್ಲಿ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡವು ಮಹಿಳಾ ವಿಶ್ವಕಪ್ಗಾಗಿ ನ್ಯೂಜಿಲೆಂಡ್ಗೆ ಪ್ರಯಾಣಿಸಲು ನಿರಾಕರಿಸಿತು. ತಂಡವು ಇಡೀ ಪಂದ್ಯಾವಳಿಯಿಂದ ಹಿಂದೆ ಸರಿಯಿತು. ಆದರೆ ಇದರ ಹಿಂದಿನ ಕಾರಣ ಭದ್ರತೆಯಲ್ಲ, ಆದರೆ ವರ್ಣಭೇದ ನೀತಿಯಾಗಿತ್ತು. 1981 ರಲ್ಲಿ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ತಂಡವನ್ನು ರಗ್ಬಿ ಆಟಕ್ಕಾಗಿ ತಮ್ಮ ದೇಶಕ್ಕೆ ಆಹ್ವಾನಿಸಿತು. ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟಗಳು ನಡೆಯುತ್ತಿದ್ದವು. ಆದರೂ ಇದೆಲ್ಲವನ್ನ ಲೆಕ್ಕಿಸದೇ ದಕ್ಷಿಣ ಆಫ್ರಿಕಾವನ್ನು ನ್ಯೂಜಿಲೆಂಡ್ ಆಹ್ವಾನಿಸಿತ್ತು. ಪ್ರತಿಭಟನಾಕಾರರನ್ನು ಬೆಂಬಲಿಸಿ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡವು ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ನಡೆದ ಮಹಿಳಾ ವಿಶ್ವಕಪ್ನಿಂದ ಹೊರಗುಳಿದಿತ್ತು.
Comments