International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕುರಿತು ವಾಸ್ತವದ ವಿಚಾರಗಳು
- new waves technology
- Oct 25, 2024
- 2 min read
ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬದಲು, ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಫೆಬ್ರವರಿ 2025ರಲ್ಲಿ ಭೂಮಿಗೆ ಮರಳುವ ಸಾಧ್ಯತೆಗಳಿವೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ಕಾರ್ಯ ನಿರ್ವಹಿಸುತ್ತಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬದಲು, ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಫೆಬ್ರವರಿ 2025ರಲ್ಲಿ ಭೂಮಿಗೆ ಮರಳುವ ಸಾಧ್ಯತೆಗಳಿವೆ ಎಂದು ನಾಸಾ ಘೋಷಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕ್ರ್ಯೂ-9 ಯೋಜನೆಯನ್ನು ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ನೌಕೆ ಒಯ್ಯಲಿದೆ. ಇದು ಆರಂಭದಲ್ಲಿ ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಒಯ್ಯುವ ಉದ್ದೇಶ ಹೊಂದಿತ್ತಾದರೂ, ಈಗ ಅಗತ್ಯ ಬಿದ್ದರೆ ಎರಡು ಆಸನಗಳನ್ನು ಖಾಲಿ ಬಿಟ್ಟು ಉಡಾವಣೆಗೊಳಿಸಲಾಗುತ್ತದೆ. ಉಳಿದ ಎರಡು ಆಸನಗಳು ಸುನಿತಾ ಮತ್ತು ಬುಚ್‌ರನ್ನು ಭೂಮಿಗೆ ಕರೆತರಲು ನೆರವಾಗಲಿದೆ.
ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಕೇವಲ ಎಂಟು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಎಂಟು ತಿಂಗಳಿಗೂ ಹೆಚ್ಚು ಕಾಲ ಐಎಸ್ಎಸ್‌ನಲ್ಲಿ ನೆಲೆಸಬೇಕಾಗುತ್ತದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕುರಿತಾದ ಕೆಲವು ವಾಸ್ತವ ವಿಚಾರಗಳನ್ನು ತಿಳಿದುಕೊಳ್ಳೋಣ...
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 15 ದೇಶಗಳ ಐದು ವಿವಿಧ ಬಾಹ್ಯಾಕಾಶ ಸಂಸ್ಥೆಗಳು ನಿರ್ವಹಿಸುತ್ತವೆ.
ಈ ಐದು ಬಾಹ್ಯಾಕಾಶ ಸಂಸ್ಥೆಗಳೆಂದರೆ: ಅಮೆರಿಕಾದ ನಾಸಾ, ರಷ್ಯಾದ ರಾಸ್‌ಕಾಸ್ಮೋಸ್, ಜಪಾನಿನ ಜಾಕ್ಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ), ಹಾಗೂ ಕೆನಡಿಯನ್ ಸ್ಪೇಸ್ ಏಜೆನ್ಸಿ (ಸಿಎಸ್ಎ).
ಬಾಹ್ಯಾಕಾಶ ನಿಲ್ದಾಣದಲ್ಲಿ ಜನರು ನವೆಂಬರ್ 2000ದಿಂದ ನಿರಂತರವಾಗಿ ಜೀವಿಸುತ್ತಿದ್ದಾರೆ.
ಏಳು ಸಿಬ್ಬಂದಿಗಳ ಒಂದು ತಂಡ ಪ್ರತಿ ಸೆಕೆಂಡಿಗೆ ಐದು ಮೈಲಿ (ಪ್ರತಿ ಸೆಕೆಂಡಿಗೆ 8 ಕಿಲೋಮೀಟರ್) ವೇಗದಲ್ಲಿ ಸಂಚರಿಸುವ ಬಾಹ್ಯಾಕಾಶ ನಿಲ್ದಾಣದಲ್ಲೇ ಇದ್ದು, ಕಾರ್ಯ ನಿರ್ವಹಿಸುತ್ತಾರೆ. ಬಾಹ್ಯಾಕಾಶ ನಿಲ್ದಾಣ ಪ್ರತಿ 90 ನಿಮಿಷಗಳಿಗೆ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತದೆ. ಕೆಲವೊಂದು ಬಾರಿ ಹೊಸ ಸಿಬ್ಬಂದಿಗಳು ಆಗಮಿಸುವಾಗ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚು ಜನರಿರುತ್ತಾರೆ.
ಬಾಹ್ಯಾಕಾಶ ನಿಲ್ದಾಣ ದಿನಕ್ಕೆ 16 ಬಾರಿ ಪರಿಭ್ರಮಣೆ ನಡೆಸುತ್ತದೆ. ಆ ಮೂಲಕ ಬಾಹ್ಯಾಕಾಶ ನಿಲ್ದಾಣ ದಿನಕ್ಕೆ 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಗಮನಿಸುತ್ತದೆ.
ಪೆಗ್ಗಿ ವಾಟ್ಸನ್ ಅವರು ಬಾಹ್ಯಾಕಾಶದಲ್ಲಿ ಅತ್ಯಧಿಕ ದಿನ ಕಳೆದ ಅಮೆರಿಕನ್ ದಾಖಲೆ ಹೊಂದಿದ್ದಾರೆ. ಅವರು 2017, ಸೆಪ್ಟೆಂಬರ್ 2 ರಂದು ಐಎಸ್ಎಸ್‌ನಲ್ಲಿ 665 ದಿನಗಳನ್ನು ಪೂರೈಸಿದ್ದರು.
ಬಾಹ್ಯಾಕಾಶ ನಿಲ್ದಾಣ ಆರು ಕೋಣೆಗಳ ಮನೆಗಿಂತಲೂ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ. ಇದರಲ್ಲಿ ಆರು ಮಲಗುವ ಸ್ಥಳಗಳು, ಎರಡು ಸ್ನಾನಗೃಹಗಳು, ಒಂದು ಜಿಮ್, ಬೇ ವಿಂಡೋ ಎಂದು ಕರೆಯುವ ವಿಶೇಷ ಕಿಟಕಿಯೂ ಸೇರಿವೆ. ಈ ಬೇ ವಿಂಡೋದ ಮೂಲಕ ಸುತ್ತಲೂ 360 ಡಿಗ್ರಿ ವೀಕ್ಷಣೆ ನಡೆಸಬಹುದಾಗಿದೆ. ಬೇ ವಿಂಡೋ ಒಂದು ದೊಡ್ಡದಾದ, ಹೊರಗಡೆ ಸಾಗುವ ಕಿಟಕಿಯಾಗಿದ್ದು, ಪನೋರಮಾ ಕಿಟಕಿಯ ರೀತಿಯಲ್ಲಿ ವಿಶಾಲ ನೋಟವನ್ನು ಒದಗಿಸುತ್ತದೆ.
ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮೂಳೆ ಮತ್ತು ಮಾಂಸಖಂಡಗಳು ಸವೆಯದಂತೆ ನೋಡಿಕೊಳ್ಳುವ ಸಲುವಾಗಿ ಗಗನಯಾತ್ರಿಗಳು ಪ್ರತಿದಿನವೂ ಕನಿಷ್ಠ ಎರಡು ಗಂಟೆ ವ್ಯಾಯಾಮ ನಡೆಸುತ್ತಾರೆ.
ಗಗನಯಾತ್ರಿಗಳು ಮತ್ತು ಕಾಸ್ಮೋನಾಟ್‌ಗಳು ನಿಯಮಿತವಾಗಿ ಬಾಹ್ಯಾಕಾಶ ನಡಿಗೆ ನೆರವೇರಿಸಿ, ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ, ನಿರ್ವಹಣೆ, ದುರಸ್ತಿಗಳನ್ನು ನಡೆಸುತ್ತಾರೆ.
ಬಾಹ್ಯಾಕಾಶ ನಿಲ್ದಾಣ 356 ಅಡಿ (109 ಮೀಟರ್) ಉದ್ದವಿದ್ದು, ಅಮೆರಿಕನ್ ಫುಟ್‌ಬಾಲ್ ಮೈದಾನದ ಗಾತ್ರವನ್ನು ಹೋಲುತ್ತದೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ವ್ಯವಸ್ಥೆ ಒದಗಿಸಲು 8 ಮೈಲಿಗಳ ಉದ್ದದ ವೈರಿಂಗ್ ಅಳವಡಿಸಲಾಗಿದೆ.
ಬಾಹ್ಯಾಕಾಶ ನಿಲ್ದಾಣ ಏಕಕಾಲದಲ್ಲಿ 8 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸಬಹುದು.
ಬಾಹ್ಯಾಕಾಶ ನೌಕೆಗಳು ಉಡಾವಣೆಗೊಂಡ ನಾಲ್ಕು ಗಂಟೆಗಳ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಬಲ್ಲವು.
ನಾಲ್ಕು ರೀತಿಯ ಸಾಗಾಣಿಕಾ ಬಾಹ್ಯಾಕಾಶ ನೌಕೆಗಳು ಬಾಹ್ಯಾಕಾಶ ನಿಲ್ದಾಣಕ್ಕೆ ವೈಜ್ಞಾನಿಕ ಉಪಕರಣಗಳು, ಆಹಾರ ಸಾಮಗ್ರಿಗಳು, ಇತ್ಯಾದಿ ಉಪಕರಣಗಳನ್ನು ಪೂರೈಸುತ್ತವೆ. ಅವೆಂದರೆ: ನಾರ್ಥ್ರಾಪ್ ಗ್ರುಮ್ಮನ್ ಸಂಸ್ಥೆಯ ಸಿಗ್ನಸ್, ಸ್ಪೇಸ್ಎಕ್ಸ್‌ನ ಡ್ರ್ಯಾಗನ್, ಜಾಕ್ಸಾದ ಎಚ್‌ಟಿವಿ ಹಾಗೂ ರಷ್ಯಾದ ಪ್ರೋಗ್ರೆಸ್.
ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳುವರೇ ಸುನಿತಾ ವಿಲಿಯಮ್ಸ್? ಎದುರಿಸಬೇಕಾದ ಆರೋಗ್ಯ ಅಪಾಯಗಳೇನು? (ಜಾಗತಿಕ ಜಗಲಿ)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸೂಕ್ಷ್ಮ ಗುರುತ್ವಾಕರ್ಷಣಾ ಪ್ರಯೋಗಾಲಯ ಎಕ್ಸ್‌ಪೆಡಿಷನ್ 60, ಅಂದಾಜು 108 ದೇಶಗಳ, ಬಹುತೇಕ 3,000 ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದೆ.
ಐಎಸ್ಎಸ್ ಭೂಮಿಯ ಮೇಲೆ 400 ಕಿಲೋಮೀಟರ್ (ಅಂದಾಜು 250 ಮೈಲಿ) ಎತ್ತರದಲ್ಲಿ ಪರಿಭ್ರಮಣೆ ನಡೆಸುತ್ತದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯ 90% ಜನಸಂಖ್ಯೆಯ ಮೇಲಿನಿಂದ ಹಾದುಹೋಗುತ್ತದೆ. ಆ ಮೂಲಕ, ಗಗನಯಾತ್ರಿಗಳು ಭೂಮಿಯ ಮಿಲಿಯನ್‌ಗಟ್ಟಲೆ ಛಾಯಾಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ.
Comments