IPL 2025: 'ಈ ಸಲ ಕಪ್ RCBದೇ'-ಕೊನೆಗೂ Rajat Patidar ಪಡೆ ಶ್ಲಾಘಿಸಿದ Ambati Rayudu, CSK ಮಾಜಿ ಆಟಗಾರನ ಅಚ್ಚರಿ ಹೇಳಿಕೆ!
- new waves technology
- Apr 22
- 2 min read
ತವರು ಮೈದಾನ ಹೊರತು ಪಡಿಸಿ ಹೊರಗಿನ ಮೈದಾನಗಳಲ್ಲಿ ಆರ್ ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ತಂಡವನ್ನು ಟೂರ್ನಿ ಆರಂಭದಿಂದಲೂ ಟೇಬಲ್ ನಲ್ಲಿ ಟಾಪ್ 5ನೊಳಗೇ ಇರಿಸಿದೆ.

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನ ಉತ್ತಮವಾಗಿದ್ದು, ಪ್ಲೇಆಫ್ ಗೇರುವ ಸಾಧ್ಯತೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.
ತವರು ಮೈದಾನ ಹೊರತು ಪಡಿಸಿ ಹೊರಗಿನ ಮೈದಾನಗಳಲ್ಲಿ ಆರ್ ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ತಂಡವನ್ನು ಟೂರ್ನಿ ಆರಂಭದಿಂದಲೂ ಟೇಬಲ್ ನಲ್ಲಿ ಟಾಪ್ 5ನೊಳಗೇ ಇರಿಸಿದೆ. ಆರ್ಸಿಬಿ ತಂಡವು 8 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದ್ದು, ಈ ಐದು ಗೆಲುವುಗಳೊಂದಿಗೆ 10 ಅಂಕಗಳನ್ನು ಪಡೆದಿದೆ.
ಪ್ಲೇ ಆಫ್ ಗೆ ಆರ್ ಸಿಬಿ
ಆರ್ ಸಿಬಿ ತಂಡ ತನ್ನ ಹಾಲಿ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರೆ, ತಂಡ ಪ್ಲೇ ಆಫ್ ಗೇರುವ ಸಾಧ್ಯತೆ ಇದೆ. ಆರ್ಸಿಬಿ ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್ ಆಗಿದ್ದು, ಈ ಪಂದ್ಯವನ್ನೂ ಆರ್ ಸಿಬಿಯೇ ಗೆಲ್ಲುವ ಸಾಧ್ಯತೆ ಇದೆ.
ಆರ್ಸಿಬಿ ಪಡೆ ಇದೇ ಪ್ರದರ್ಶನ ಮುಂದುವರೆಸಿದರೆ, ಅವರು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.
ಖಾಸಗಿ ಚಾನೆಲ್ನಲ್ಲಿ ಮಾತನಾಡಿದ ಅಂಬಾಟಿ ರಾಯುಡು, 'ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೇ ಪ್ರದರ್ಶನದೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಟ್ಟರೆ ಅವರನ್ನು ತಡೆಯುವುದು ಕಷ್ಟ. ಆರ್ಸಿಬಿ ಏನಾದ್ರೂ ಪ್ಲೇಆಫ್ ಹಂತಕ್ಕೇರಿದರೆ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಳ್ಳಲಿದೆ.
ಒಂದು ವೇಳೆ ಆರ್ಸಿಬಿ ತಂಡವು ತನ್ನ ತವರಿನಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರುವುದು ಸುಲಭವಾಗಲಿದೆ. ಆದರೆ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮೂರು ಪಂದ್ಯ ಸೋತಿರುವುದೇ ಈಗ ಅವರ ದೊಡ್ಡ ಚಿಂತೆ.
ಇದಾಗ್ಯೂ ಮುಂದಿನ ಪಂದ್ಯಗಳಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಗೆಲುವು ದಾಖಲಿಸಿದರೆ, ನಾಕೌಟ್ ಹಂತಕ್ಕೇರುವುದನ್ನು ಎದುರು ನೋಡಬಹುದು. ಪ್ಲೇಆಫ್ ಹಂತಕ್ಕೇರಿದರೆ, ಆರ್ಸಿಬಿ ತಂಡವನ್ನು ಫೈನಲ್ನಲ್ಲಿ ಎದುರು ನೋಡಬಹುದು. ಏಕೆಂದರೆ ಪ್ಲೇಆಫ್ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಗಳಲ್ಲಿ ಆರ್ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ಆರ್ ಸಿಬಿ ಗೆಲ್ಲಬಾರದು ಎಂದು ಹೇಳಿದ್ದ ರಾಯುಡು
ಈ ಹಿಂದೆ ಐಪಿಎಲ್ ಆರಂಭವಾದಾಗಿನಿಂದ ಇದೇ ಅಂಬಾಟಿ ರಾಯುಡು ಆರ್ ಸಿಬಿ ವಿರುದ್ದ ಮುಗಿಬೀಳುತ್ತಿದ್ದರು. ಆರ್ ಸಿಬಿ ಟ್ರೋಫಿ ಗೆಲ್ಲಬಾರದು ಎಂದು ಹೇಳಿದ್ದರು. ಪೋಡ್ ಕಾಸ್ಟ್ವೊಂದರಲ್ಲಿ ಮಾತನಾಡಿದ ರಾಯುಡು, ಆರ್ಸಿಬಿ ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ.
ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಬಹುದು. ಹೀಗಾಗಿ ನಾನು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಆಶಿಸುತ್ತೇನೆ ಎಂದು ರಾಯುಡು ಹೇಳಿದ್ದರು.
ಆದರೆ ಅಂಬಟಿ ರಾಯುಡು ನಿರೀಕ್ಷೆ ಇದೀಗ ಹುಸಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಪ್ರದರ್ಶನ ನೀಡಿ ಟೇಬಲ್ ನ ಅಂತಿಮ ಸ್ಥಾನದಲ್ಲಿದ್ದು, ಆರ್ ಸಿಬಿ ಅದ್ಭುತ ಪ್ರದರ್ಶನದ ಮೂಲಕ ಅಗ್ರ 5ರೊಳಗೆ ಇದೆ. ಇದರ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಅಂಬಾಟಿ ರಾಯುಡು, ಈ ಬಾರಿ ಆರ್ಸಿಬಿ ಪ್ಲೇಆಫ್ಗೆ ಎಂಟ್ರಿ ಕೊಟ್ಟರೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದಿದ್ದಾರೆ.
Comments