top of page

ONOE Bill: ಬಹುಮತವಿದ್ದರೂ ಮಸೂದೆ ಪರ 269 ಮತ; ಸೋತು ಗೆದ್ದ ವಿಪಕ್ಷಗಳು? JPC ಗೆ ಮಸೂದೆ ಕಳುಹಿಸಿದ ಹಿಂದಿನ ಮರ್ಮವೇನು?

  • Writer: new waves technology
    new waves technology
  • Dec 17, 2024
  • 2 min read

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ಎರಡು ವಿಧೇಯಕಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ವಿವರವಾದ ಪರಿಗಣನೆಗೆ ಶಿಫಾರಸು ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಸದನಕ್ಕೆ ತಿಳಿಸಿದರು.

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ INDIA ವಿರೋಧದ ನಡುವೆಯೂ ಒಂದು ದೇಶ, ಒಂದು ಚುನಾವಣೆ ಮಸೂದೆ (One Nation One Election bill) ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಮಸೂದೆಯ ಪರವಾಗಿ 269 ಸದಸ್ಯರು ಮತ ಚಲಾವಣೆ ಮಾಡಿದ್ದರೆ, 198 ಸದಸ್ಯರು ಮಸೂದೆಯನ್ನು ವಿರೋಧಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ಎರಡು ವಿಧೇಯಕಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ವಿವರವಾದ ಪರಿಗಣನೆಗೆ ಶಿಫಾರಸು ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಸದನಕ್ಕೆ ತಿಳಿಸಿದರು.

ಮಸೂದೆಗಳನ್ನು ಮಂಡಿಸಿದ ಬಳಿಕ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಪಡೆಯಲು ಸಾಧ್ಯವಾಗಲಿಲ್ಲ, ಹಾಗಾಗಿ ವಿರೋಧ ಪಕ್ಷಗಳು ಸೋತರೂ ಗೆದ್ದಿವೆ ಎಂದು ಶಶಿ ತರೂರ್ ಆದಿಯಾಗಿ ವಿಪಕ್ಷ ಸಂಸದರು ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಇವೆಲ್ಲದರ ನಡುವೆ ಇಂಡಿಯನ್ ಎಕ್ಸ್ ಪ್ರೆಸ್ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ ಡಿ ಟಿ ಆಚಾರಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಕಟಿಸಿರುವ ವರದಿಯೊಂದು ಗಮನಾರ್ಹವಾಗಿದೆ.

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಚಯಿಸುವುದಕ್ಕಾಗಿ ವಿಶೇಷ ಬಹುಮತ, ಅಂದರೆ ಸದನದ ಒಟ್ಟು ಸದಸ್ಯತ್ವದ 50% ಕ್ಕಿಂತ ಹೆಚ್ಚಿನ ಬಹುಮತ ಮತ್ತು ಹಾಜರಾತಿ ಇರುವ ಸದನದ ಮೂರನೇ ಎರಡರಷ್ಟು ಸದಸ್ಯರ ಬಹುಮತ ಮತ್ತು ಮತದಾನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


ಎಂ ಎನ್ ಕೌಲ್ ಮತ್ತು ಎಸ್ ಎಲ್ ಶಕ್ಧರ್ ಅವರು ಹೇಳಿರುವ ಸಂಸತ್ತಿನ ನಡಾವಳಿಕೆ ಮತ್ತು ಕಾರ್ಯವಿಧಾನ ಸಹ ಇದನ್ನೇ ತಿಳಿಸುತ್ತದೆ. ಅದೇನೆಂದರೆ, "ಸಾಂವಿಧಾನಿಕ ನಿಬಂಧನೆಯ ಕಟ್ಟುನಿಟ್ಟಾದ ವ್ಯಾಖ್ಯಾನವನ್ನು ತೆಗೆದುಕೊಂಡರೆ, ಅದರಲ್ಲಿ ಸೂಚಿಸಲಾದ ವಿಶೇಷ ಬಹುಮತ ಮೂರನೇ ರೀಡಿಂಗ್ ಹಂತದಲ್ಲಿ ಮತದಾನಕ್ಕೆ ಮಾತ್ರ ಅಗತ್ಯವಾಗಬಹುದು, ಆದರೆ ಎಚ್ಚರಿಕೆಯ ಕ್ರಮವಾಗಿ ಎಲ್ಲಾ ಪರಿಣಾಮಕಾರಿ ಹಂತಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ವಿಶೇಷ ಬಹುಮತದ ಅಗತ್ಯವನ್ನು ಹೇಳಲಾಗಿದೆ. ಉದಾಹರಣೆಗೆ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವನೆ (Motion); ಆಯ್ಕೆ ಅಥವಾ ಜಂಟಿ ಸಮಿತಿಯು ವರದಿ ಮಾಡಿರುವ ವಿಧೇಯಕವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವನೆ; ಮಸೂದೆಗೆ ಷರತ್ತುಗಳು ಮತ್ತು ವೇಳಾಪಟ್ಟಿಗಳನ್ನು ರವಾನಿಸಲು; ಮತ್ತು ಮಸೂದೆಯನ್ನು ಅಂಗೀಕರಿಸುವ ಪ್ರಸ್ತಾವನೆಗಳು ಪ್ರಕ್ರಿಯೆಯ ಭಾಗವಾಗಿರಲಿದೆ. ಹೀಗಾಗಿ, ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲು ಮಸೂದೆಯನ್ನು ಬಹಿರಂಗಪಡಿಸಲಾಗುವುದು ಅಥವಾ ಮಸೂದೆಯನ್ನು ಆಯ್ಕೆ ಅಥವಾ ಜಂಟಿ ಸಮಿತಿಗೆ ಉಲ್ಲೇಖಿಸಬೇಕು ಎಂಬ ಪ್ರಸ್ತಾಪಗಳನ್ನು ಸರಳ ಬಹುಮತದಿಂದ ಅಂಗೀಕರಿಸಲಾಗುತ್ತದೆ.


ನಿಯಮಗಳೇನು ಹೇಳುತ್ತವೆ?

ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ಪೈಕಿ, ನಿಯಮ 157, ಸಂವಿಧಾನವನ್ನು ತಿದ್ದುಪಡಿ ಮಾಡಲು ಬಯಸುವ ಅಧ್ಯಾಯ ವಿಧೇಯಕಗಳಲ್ಲಿ, ಪ್ರಕ್ರಿಯೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಅಂತಹ ವಿಧೇಯಕಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಈ ಕೆಳ ಕಂಡಂತೆ ಇದ್ದರೆ,

  • ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಪ್ರಸ್ತಾವನೆ

  • ಸದನದ ಆಯ್ಕೆ ಸಮಿತಿ ಅಥವಾ ಸದನಗಳ ಜಂಟಿ ಸಮಿತಿಯು ವರದಿ ಮಾಡಿರುವ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಪ್ರಸ್ತಾವನೆ

  • ವಿಧೇಯಕ, ಅಥವಾ ತಿದ್ದುಪಡಿ ಮಾಡಲಾದ ವಿಧೇಯಕವನ್ನು, ಸಂದರ್ಭಾನುಸಾರ ಅಂಗೀಕರಿಸಲಾಗುವುದು ಎಂಬ ಪ್ರಸ್ತಾವನೆಗಳಿದ್ದರೆ ಸದನದ ಒಟ್ಟು ಸದಸ್ಯತ್ವದ ಪೈಕಿ ಬಹುಮತದಿಂದ ಅಥವಾ ಉಪಸ್ಥಿತರಿರುವ ಮತ್ತು ಮತ ಚಲಾಯಿಸುವ ಮೂರನೇ ಎರಡರಷ್ಟು ಸದಸ್ಯರಿಗಿಂತ ಕಡಿಮೆಯಿಲ್ಲದ ಬಹುಮತದಿಂದ ಅಂಗೀಕಾರವಾದರೆ ಅದನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ” ಎಂದು ಅದು ಹೇಳುತ್ತದೆ.


ONOE Bill ಸದನ ಸಮಿತಿಗೆ ಕಳುಹಿಸಿರುವುದರ ಹಿಂದಿನ ಮರ್ಮವೇನು?

ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆಗೆ ಸಹಜವಾಗಿಯೇ ಪ್ರಾದೇಶಿಕ ಪಕ್ಷಗಳು ಹಿಂಜರಿಯುತ್ತಿವೆ.

ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿಗೆ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಗಳು ಇಲ್ಲ ಮತ್ತು ಸರ್ಕಾರದ ಜೊತೆಗೆ ಇರುವುದು ONOE ಗೆ ಹಿಂಜರಿಯುತ್ತಿರುವ ಪ್ರಾದೇಶಿಕ ಪಕ್ಷಗಳೇ. ಇದು ವಾಸ್ತವ ಸಂಗತಿಯಾಗಿರುವಾಗ ಮಸೂದೆಯನ್ನು ಪಾಸ್ ಮಾಡಲೇಬೇಕೆಂಬ ಗುರಿ ಹೊಂದಿರುವ ಬಿಜೆಪಿ ಕಂಡುಕೊಂಡಿರುವ ಮಾರ್ಗ ಸದನಗಳ ಜಂಟಿ ಸಮಿತಿಗೆ ಕಳಿಸುವುದು, ಈ ಹಂತದ ಪ್ರಕ್ರಿಯೆಗೆ ಅಥವಾ ಪ್ರಸ್ತಾವನೆಗೆ ಸರಳ ಬಹುಮತ ಸಾಕು.

ಇನ್ನು ಮಹತ್ವದ ಘಟ್ಟವೆಂದರೆ, ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ಹಂತ. ಇದಕ್ಕೆ ನೇರವಾಗಿ ಮೂರನೇ ಎರಡರಷ್ಟು ಬಹುಮತ ಅತ್ಯಗತ್ಯ. ಆದರೆ ನಿಯಮ 157, ರ ಪ್ರಕಾರ ಜಂಟಿ ಸಮಿತಿಯಿಂದ ಹೊರಬಂದ ಮಸೂದೆಯನ್ನು ಸದನದ ಒಟ್ಟು ಸದಸ್ಯತ್ವದ ಪೈಕಿ ಬಹುಮತದಿಂದ ಅಂಗೀಕರಿಸಬಹುದಾಗಿದೆ. ಈ ಕಾರಣದಿಂದಾಗಿ ಸರ್ಕಾರ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ತನ್ನ ಮಸೂದೆಯನ್ನು ಸರಳ ಬಹುಮತದೊಂದಿಗೇ ಅಂಗೀಕಾರವಾಗುವಂತೆ ನೋಡಿಕೊಳ್ಳಲು ಉಪಾಯವಾಗಿ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಜೆಪಿಸಿಗೆ ವಹಿಸಿದೆ.

Comments


bottom of page