top of page

Operation Sindoor ಬೆನ್ನಲ್ಲೇ 'ಶಾಂತಿ ಮಂತ್ರ' ಜಪಿಸಿ ಪೇಚಿಗೆ ಸಿಲುಕಿದ Congress, ಟ್ವೀಟ್ ಡಿಲೀಟ್, Indian Army ಹೊಗಳಿ ಮತ್ತೊಂದು ಪೋಸ್ಟ್! ಸ್ವಪಕ್ಷೀಯರಿಂದಲೇ ವಿರೋಧ!

  • Writer: new waves technology
    new waves technology
  • May 8
  • 2 min read

ಭಾರತೀಯ ಸೇನೆಯ ಪರಾಕ್ರಮದ ಕುರಿತು ಹೆಮ್ಮೆಯ ಮಾತುಗಳು ಬರುತ್ತಿವೆ. ಆದರೆ ಇತ್ತ ಕರ್ನಾಟಕ ಕಾಂಗ್ರೆಸ್ ಪಕ್ಷ ಮಾತ್ರ ಶಾಂತಿ ಕುರಿತು ಟ್ವೀಟ್ ಮಾಡಿ ಇದೀಗ ಪೇಚಿಗೆ ಸಿಲುಕಿದೆ.


ಬೆಂಗಳೂರು: 26 ಮಂದಿ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್​ (operation sindoor) ಕುರಿತು ಕರ್ನಾಟಕ ಕಾಂಗ್ರೆಸ್ ಮಾಡಿದ್ದ ಟ್ವೀಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಹೌದು.. ನಿನ್ನೆ ಮುಂಜಾನೆ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ತಡ ರಾತ್ರಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುವ ಮೂಲಕ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.

ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರವನ್ನು ಇಂದು ನಸುಕಿನ ಜಾವ 1.05ರಿಂದ 1.30ರ ನಡುವೆ ಪ್ರಾರಂಭಿಸಿದವು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು.

ಈ ದಾಳಿ ಬೆನ್ನಲ್ಲೇ ದೇಶಾದ್ಯಂತ ಭಾರತೀಯ ಸೇನೆಯ ಪರಾಕ್ರಮದ ಕುರಿತು ಹೆಮ್ಮೆಯ ಮಾತುಗಳು ಬರುತ್ತಿವೆ. ಆದರೆ ಇತ್ತ ಕರ್ನಾಟಕ ಕಾಂಗ್ರೆಸ್ ಪಕ್ಷ ಮಾತ್ರ ಶಾಂತಿ ಕುರಿತು ಟ್ವೀಟ್ ಮಾಡಿ ಇದೀಗ ಪೇಚಿಗೆ ಸಿಲುಕಿದೆ.

'ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ'

ಕರ್ನಾಟಕ ಕಾಂಗ್ರೆಸ್ ಅಧಿಕೃತ ಎಕ್ಸ್ ಖಾತೆಯಲ್ಲಿ ಶಾಂತಿಯ ಮಂತ್ರ ಪಠಿಸುವ ಟ್ವೀಟ್ ಹಾಕಿತ್ತು. ಆದರೆ ಇದು ಚರ್ಚೆಗೊಳಲಾಗುತ್ತಲೇ ಡಿಲೀಟ್ ಮಾಡಲಾಯಿತು. ಆಪರೇಷನ್ ಸಿಂಧೂರ್ ಕುರಿತಾಗಿ ದೇಶದಲ್ಲಿ ಚರ್ಚೆಗಳು ಹಾಗೂ ಸೇನೆಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಶಾಂತಿಯ ಮಂತ್ರವನ್ನು ಸಾರುವ ಅರ್ಥದಲ್ಲಿ ಕಾಂಗ್ರೆಸ್ ಟ್ಚೀಟ್ ಒಂದನ್ನು ಮಾಡಿತ್ತು. ‘ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ’ ಎಂದು ಟ್ವೀಟ್ ಮಾಡಿತ್ತು. ಆದರೆ ಪಕ್ಷದ ನಡೆ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್ ಕೂಡಲೇ ಇದನ್ನು ಡಿಲೀಟ್ ಮಾಡಿದೆ.

ಸೇನೆ ಹೊಗಳಿ ಮತ್ತೊಂದು ಟ್ವೀಟ್

ಕಾಂಗ್ರೆಸ್ ಟ್ವೀಟ್ ಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತು ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಕಾಂಗ್ರೆಸ್​ ಆ ಟ್ವೀಟ್​​ನ್ನು ಡಿಲೀಟ್​ ಮಾಡಿದೆ. ಅಲ್ಲದೆ ಬಳಿಕ ಭಾರತೀಯ ಸೇನೆಯನ್ನು ಹೊಗಳುವ ಮೂಲಕ ಮತ್ತೊಂದು ಹೊಸ ಟ್ವೀಟ್ ಮಾಡಿದೆ. 'ವಿಶ್ವದ ಬಲಿಷ್ಠ ವಾಯುಪಡೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಭಾರತೀಯ ವಾಯುಪಡೆ ಪಾಕ್​ ಮೇಲೆ ದಾಳಿ ಮಾಡುವ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೂಕ್ತ ಉತ್ತರ ನೀಡಿದೆ. ನಾವು ಸರ್ಕಾರದೊಂದಿಗೆ ಮತ್ತು ಭದ್ರತಾ ಪಡೆಯೊಂದಿಗೆ ನಿಲ್ಲುತ್ತೇವೆ' ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಟ್ವೀಟ್ ಅಗತ್ಯವಿರಲಿಲ್ಲ ಎಂದ ಪ್ರಿಯಾಂಕ್ ಖರ್ಗೆ

ಇನ್ನು ಇದೇ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ದಾಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪಹಲ್ಗಾಮ್ ದಾಳಿಯ ನಂತರದಲ್ಲಿ ಸರಕಾರದ ಯಾವುದೇ ನಿಲುವಿಗೆ ನಮ್ಮ ಬೆಂಬಲ ಇದೆ ಎಂದಿದ್ದೆವು. ಭಾರತೀಯ ಸೇನೆ ಭಯೋತ್ಪಾದಕರ ನೆಲೆಯನ್ನು ಅಷ್ಟೇ ಟಾರ್ಗೆಟ್ ಮಾಡಿದೆ. ಪಾಕಿಸ್ತಾನ ಈ ದಾಳಿಗೆ ತಿರುಗೇಟು ಕೊಟ್ಟರೆ ನಾವು ಎದುರಿಸಲು ಸಿದ್ದ ಎಂದು ಭಾರತೀಯ ಸೇನೆ ಕೊಟ್ಟಿದೆ. ರಾಷ್ಟ್ರದ ಐಕ್ಯತೆ ಬಂದಾಗ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಭಾರತೀಯ ಸೇನೆಯ ಜೊತೆಗೆ ಇದ್ದೇವೆ ಎಂದರು.

ನಾವು ಶಾಂತಿಯುತ ರಾಷ್ಟ್ರ. ಅಗತ್ಯ ಬಿದ್ದಾಗ ಯುದ್ಧ ಮಾಡಿದ್ದೆವು. ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು ಸರಿಯಲ್ಲ. ಎರಡು ಸಾರಿ ನಾವು ಪಾಕಿಸ್ತಾನದ ವಿರುದ್ಧ ಯುದ್ದ ಮಾಡಿದ್ದೆವು. ಚೀನಾದ ವಿರುದ್ಧ ಯುದ್ಧ ನಡೆದಾಗ ಬಿಜೆಪಿ ಹುಟ್ಟಿತ್ತಾ? ಇಷ್ಟು ದೊಡ್ಡ ಸೇನೆಯನ್ನು ಬೆಳೆಸಿದ್ದು ಉಗ್ರರ ವಿರುದ್ದ. ಬಿಜೆಪಿ ಕೂಡಾ ರಾಜಕೀಯ ಮಾಡಬಾರದು ಎಂದು ಹೇಳಿದರು.

ವಿಜಯೇಂದ್ರ ಖಂಡನೆ

ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ಟ್ವೀಟ್ ಸಂಬಂಧ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ಸಿನವರು ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ ಎಂದು ಇವತ್ತು ಟ್ವೀಟ್ ಮಾಡಿದ್ದಾರೆ. ಇವರಿಗೆ ನಾಚಿಕೆ ಆಗಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಂಥ ಹೇಳಿಕೆ ನೀಡಿದ್ದು, ಶೋಭೆ ತರತಕ್ಕಂಥದ್ದಲ್ಲ ಎಂದು ಆಕ್ಷೇಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಯಾವ ರೀತಿ ಟ್ವೀಟ್ ಮಾಡಿದ್ದಾರೋ ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ಸಿನವರು ಉಗ್ರರ ಪರವಾಗಿ ಇದ್ದಾರಾ? ಭಾರತದ ಪರವಾಗಿ ಇದ್ದಾರಾ? ಅಥವಾ ಪಾಕಿಸ್ತಾನದ ಪರವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಸೇನೆಗೆ ಡಿಕೆಶಿ ಬೆಂಬಲ

ಇತ್ತ ಪಾಕ್​ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಟ್ವೀಟ್ ಮಾಡಿದ್ದು, ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ದಾಳಿ ಮಾಡಲಾಗಿದೆ. ನಾವು ಭಾರತ ಸರ್ಕಾರದ ಪರ ಇದ್ದೇವೆ, ಸೇನೆಗೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.


Comentarios


bottom of page