Pope Francis ನಿಧನ: "ಹ್ಯಾಬೆಮಸ್ ಪಾಪಮ್..." ಮುಂದಿನ ಪೋಪ್ ಯಾರು? ಹೇಗಿರಲಿದೆ ಆಯ್ಕೆ ಪ್ರಕ್ರಿಯೆ?
- new waves technology
- Apr 21
- 2 min read

ವ್ಯಾಟಿಕನ್: ಪೋಪ್ ಫ್ರಾನ್ಸಿಸ್ ಅವರ ಮರಣದಿಂದಾಗಿ ಕ್ಯಾಥೋಲಿಕ್‌ಗಳ ಅತ್ಯುನ್ನತ ಧರ್ಮಗುರುವಿನ ಹುದ್ದೆ ಖಾಲಿಯಾಗಿದ್ದು, ಇದನ್ನು ವ್ಯಾಟಿಕನ್‌ನಲ್ಲಿ ದೀರ್ಘ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕಾಗಿದೆ.
ಪೋಪ್ ಫ್ರಾನ್ಸಿಸ್ ನಿಧನರಾಗಿದ್ದು ಮುಂದಿನ ಪ್ರಕ್ರಿಯೆಗಳೇನು? ವ್ಯಾಟಿಕನ್ ನಿಯಮಗಳು ಏನು ಹೇಳುತ್ತವೆ ಎಂಬ ಬಗ್ಗೆ ವಿವರಣೆ ಇಲ್ಲಿದೆ...
88 ವರ್ಷದ ಪೋಪ್, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು.
ಕ್ಯಾಮೆರ್ಲೆಂಗೊ (ವ್ಯಾಟಿಕನ್‌ನ ಆಸ್ತಿ ಮತ್ತು ಆದಾಯದ ಆಡಳಿತಾಧಿಕಾರಿ ವಿಭಾಗ) ಮೊದಲು ಸಾವನ್ನು ಪರಿಶೀಲಿಸುತ್ತಾರೆ. ಅವರು ಪೋಪ್‌ನ ಬ್ಯಾಪ್ಟಿಸಮ್ ಹೆಸರನ್ನು ಮೂರು ಬಾರಿ ಕರೆಯುತ್ತಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಪೋಪ್ ನಿಧನರಾಗಿದ್ದಾರೆ ಎಂದು ಅವರು ಘೋಷಿಸುತ್ತಾರೆ. ಪೋಪ್ ಮರಣದ ನಂತರ ಅವರ ಹಣೆಯನ್ನು ತಟ್ಟಲು ಸಣ್ಣ ಬೆಳ್ಳಿ ಸುತ್ತಿಗೆಯನ್ನು ಬಳಸುವ ಪದ್ಧತಿ ಇತ್ತು. ಆದರೆ ಇದು 1963 ರ ನಂತರ ಕೊನೆಗೊಂಡಿತು.ನಂತರ ವ್ಯಾಟಿಕನ್ ತನ್ನ ಅಧಿಕೃತ ಮಾರ್ಗಗಳ ಮೂಲಕ ಪೋಪ್ ನಿಧನರಾಗಿದ್ದಾರೆ ಎಂದು ಜಗತ್ತಿಗೆ ತಿಳಿಸುತ್ತದೆ.
ನಂತರ ಪೋಪ್ ಅಪಾರ್ಟ್ಮೆಂಟ್ ನ್ನು ಕ್ಯಾಮೆರ್ಲೆಂಗೊ ಲಾಕ್ ಮಾಡುತ್ತದೆ. ಹಿಂದಿನ ಕಾಲಗಳಲ್ಲಿ ಲೂಟಿ ಮಾಡುವುದನ್ನು ತಡೆಯಲು ಈ ರೀತಿಯ ಕ್ರಮ ವಹಿಸಲಾಗುತ್ತಿತ್ತು ಮಾಡಲಾಗುತ್ತಿತ್ತು. ಕ್ಯಾಮೆರ್ಲೆಂಗೊ ಫಿಶರ್ ಮ್ಯಾನ್ ಉಂಗುರ ಮತ್ತು ಪೋಪ್ ಅವರ ಮುದ್ರೆಯನ್ನು ನಾಶಮಾಡಲು ವ್ಯವಸ್ಥೆ ಮಾಡುತ್ತದೆ. ಇದು ಆ ನಿರ್ದಿಷ್ಟ ಪೋಪ್ ಅವರ ಆಳ್ವಿಕೆಯ ಅಂತ್ಯವನ್ನು ಸಂಕೇತಿಸುತ್ತದೆ.
ಹೊಸ ಪೋಪ್ ನಿಯುಕ್ತಿಯನ್ನು ನಿಯಂತ್ರಿಸುವ ಯೂನಿವರ್ಸಿ ಡೊಮಿನಿಸಿ ಗ್ರೆಗಿಸ್ ಸಂವಿಧಾನದ ಪ್ರಕಾರ, ಪೋಪ್ ಅವರ ಅಂತ್ಯಕ್ರಿಯೆಯನ್ನು ಅವರ ಮರಣದ ನಂತರ 4-6 ದಿನಗಳಲ್ಲಿ ನಡೆಸಲಾಗುತ್ತದೆ. ನಂತರ ಪೋಪ್ ಅವರನ್ನು ಬೇರೆಡೆ ಸಮಾಧಿ ಮಾಡಲು ವಿನಂತಿಸಿದೇ ಇದ್ದಲ್ಲಿ ಸಾಮಾನ್ಯವಾಗಿ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಗುತ್ತದೆ.
ಒಂಬತ್ತು ದಿನಗಳ ಶೋಕಾಚರಣೆಯ ಅವಧಿ, ಹೊಸ ಪೋಪ್ ಚುನಾವಣೆ
ತಮ್ಮ ಮುಂದಿನ ಪೋಪ್ ಅನ್ನು ಆಯ್ಕೆ ಮಾಡಲು ಪೋಪ್ ಸಮಾವೇಶವು ಪೋಪ್ ಮರಣದಸುಮಾರು 15-20 ದಿನಗಳ ನಂತರ ಪ್ರಾರಂಭವಾಗುತ್ತದೆ. 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಡಿನಲ್‌ಗಳು ಈ ರಹಸ್ಯ ಪ್ರಕ್ರಿಯೆಗಾಗಿ ವ್ಯಾಟಿಕನ್‌ನಲ್ಲಿ ಒಟ್ಟುಗೂಡುತ್ತಾರೆ. ಅವರನ್ನು ಸಿಸ್ಟೀನ್ ಚಾಪೆಲ್ ಒಳಗೆ ಇರಿಸಲಾಗುತ್ತದೆ ಮತ್ತು ಹೊರಗಿನ ಪ್ರಪಂಚದಿಂದ ಸಂಪರ್ಕದಿಂದ ದೂರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ಮಾಧ್ಯಮ ಅಥವಾ ಫೋನ್ ಸಂಪರ್ಕ ಸಹ ಇರುವುದಿಲ್ಲ.
ನಂತರ ಅಭ್ಯರ್ಥಿಯು ಮೂರನೇ ಎರಡರಷ್ಟು ಬಹುಮತ ಪಡೆಯುವವರೆಗೆ ಅವರು ಬಹು ಸುತ್ತುಗಳಲ್ಲಿ ಮತ ಚಲಾಯಿಸುತ್ತಾರೆ. ಮತ್ತು ಪ್ರತಿ ಮತದಾನದ ನಂತರ ಮತಪತ್ರಗಳನ್ನು ಸುಡಲಾಗುತ್ತದೆ. ಕಪ್ಪು ಹೊಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಸೂಚಿಸುತ್ತದೆ, ಆದರೆ ಬಿಳಿ ಹೊಗೆ ಹೊಸ ಪೋಪ್ ಆಯ್ಕೆಯಾಗಿದ್ದಾರೆ ಎಂದು ಸೂಚಿಸುತ್ತದೆ.
ಹೊಸ ಪೋಪ್ ಘೋಷಣೆ
ಹೊಸ ಪೋಪ್ ಆಯ್ಕೆಯಾದ ನಂತರ, ಅವರು ತಮಗೆ ಸಿಕ್ಕಿರುವ ಹುದ್ದೆಯನ್ನು ಸ್ವೀಕರಿಸುತ್ತಾರೆಯೇ ಎಂದು ಔಪಚಾರಿಕವಾಗಿ ಕೇಳಲಾಗುತ್ತದೆ. ಅವರು ಒಪ್ಪಿದರೆ, ಅವರು ಪಾಪಲ್ ಹೆಸರನ್ನು ಆಯ್ಕೆ ಮಾಡಬೇಕು, ಇದು ಹೆಚ್ಚಾಗಿ ಹಿಂದಿನ ಸಂತರಿಂದ ಪ್ರೇರಿತವಾಗಿದೆ. ನಂತರ ಹಿರಿಯ ಕಾರ್ಡಿನಲ್ ಡೀಕನ್ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಲ್ಯಾಟಿನ್ ಭಾಷೆಯಲ್ಲಿ "ಹ್ಯಾಬೆಮಸ್ ಪಾಪಮ್" (ಅಂದರೆ "ನಮಗೆ ಪೋಪ್ ಇದ್ದಾರೆ") ಎಂದು ಘೋಷಿಸುತ್ತಾರೆ. ಕ್ಷಣಗಳ ನಂತರ, ಹೊಸ ಪೋಪ್ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ತಮ್ಮ ಅನುಯಾಯಿಗಳನ್ನು ಸ್ವಾಗತಿಸುತ್ತಾರೆ ಮತ್ತು ಪೋಪ್ ಆಗಿ ತಮ್ಮ ಮೊದಲ ಆಶೀರ್ವಚನ ನೀಡುತ್ತಾರೆ.
Comentarios