PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..

ಕಲಬುರಗಿ: ಗುಲಬರ್ಗಾ (ಕಲಬುರಗಿ) ಎಂದಾಕ್ಷಣ ಮನದ ಸ್ಮೃತಿಪಟಲದಲ್ಲಿ ಬಹುತೇಕರಿಗೆ ಮೂಡುವ ಚಿತ್ರ; ಅದೊಂದು ಬರಪೀಡಿತ, ಹಿಂದುಳಿದ ಪ್ರದೇಶ. ಅಲ್ಲಿ ನೆತ್ತಿ ಬಿಡುವ ಬಿಸಿಲು. ನೀರಿನ ಸಮಸ್ಯೆ ಎದುರಿಸುತ್ತಿರುವ ಊರು ಎಂದೇ ಅಲ್ಲವೇ?
ಹಿಂದುಳಿದ ಹಣೆಪಟ್ಟಿಯಾಚೆಗೆ ಕಣ್ಣಾಡಿಸಿದರೆ ವೈವಿಧ್ಯಮ ಸಂಗತಿಗಳು ನೋಟಕ್ಕೆ ದಕ್ಕುತ್ತವೆ. ಕಲಬುರಗಿ ಒಂದೊಮ್ಮೆ ಬಹಮನಿಗಳ ರಾಜಧಾನಿಯಾಗಿತ್ತು. ಆಧಾತ್ಮಿಕವಾಗಿ ಖಾಜಾ ಬಂದಾನವಾಜ್ ದರ್ಗಾ, ಭಕ್ತಿ ಪಂಥದಲ್ಲಿ ಶರಣಬಸವೇಶ್ವರರ ದೇವಸ್ಥಾನ ಈ ಭಾಗದ ಅಸ್ಮಿತೆಯಾಗಿ ನಿಂತಿವೆ. ಶ್ರದ್ದಾ ಕೇಂದ್ರವಾಗಿ ಬುದ್ಧವಿಹಾರವೂ ಚಿತ್ತಾಕರ್ಷಿಸುತ್ತಿದೆ. ಇವೆಲ್ಲಕ್ಕೂ ಮುಖ್ಯವಾದ ಮತ್ತೊಂದು ತಾಣವಿದೆ; ಅದುವೇ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರ!
ಕಲಬುರಗಿಯ ಶರಣಬಸವೇಶ್ವರ ಅಪ್ಪ ಕೆರೆ ಎದುರಿನ ಎರಡು ಎಕರೆ ಪ್ರದೇಶದಲ್ಲಿ 1984ರಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರವು ಸ್ಥಾಪನೆಯಾಗಿದೆ. ವೀಕ್ಷಣೆಗೆ ಬರುವ ಯುವ ಮನಸುಗಳಲ್ಲಿ 'ವೈಜ್ಞಾನಿಕ ಮನೋಭಾವ'ದ ಕಿಡಿ ಬೆಳಗಿಸುತ್ತಿದೆ. ಈ ಕೇಂದ್ರದಲ್ಲಿ ವೀಕ್ಷಕರಿಗೆ ವಿಜ್ಞಾನ ಕಲಿಕೆಯೊಂದಿಗೆ ವಿನೋದವೂ ಸಿಗುತ್ತಿದೆ; ಜ್ಞಾನವೂ ದೊರೆಯುತ್ತದೆ. ಈ ವಿಜ್ಞಾನ ಕೇಂದ್ರ ಸ್ಥಾಪನೆಯ ಬೇರುಗಳು ಕೆದಕಿದರೆ ಐದೂವರೆ ದಶಕದ ಹಿಂದಿನ ತನಕ ಚಾಚಿವೆ.
ಅದು 1969ನೇ ಇಸ್ವಿ. ಕಲಬುರಗಿ ಎಸ್.ಬಿ.ಹೈಸ್ಕೂಲ್‌ನ ಸಣ್ಣ ಕೊಠಡಿಯೊಂದರಲ್ಲಿ ವಿಜ್ಞಾನ ಕೇಂದ್ರ 'ಹುಟ್ಟು' ಪಡೆಯಿತು. ಕೆಲವು ತಿಂಗಳಲ್ಲಿ ಅಲ್ಲಿಂದ ಕಲಬುರಗಿಯ ಮಲ್ಟಿಪರ್ಪಸ್ ಹೈಸ್ಕೂಲ್‌ಗೆ (ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು) ಸ್ಥಳಾಂತರವಾಯಿತು. ಕೇಂದ್ರದ ವಿಸ್ತಾರವು ಎರಡು ಕೊಠಡಿಗಳಿಗೆ ವ್ಯಾಪಿಸಿತು. ಆಗ ಅದನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರ' ಎಂದು ಕರೆಯಲಾಗುತ್ತಿತ್ತು. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಿಂದ (ವಿಐಟಿಎಂ) ವಿಜ್ಞಾನದ ಮಾದರಿಗಳನ್ನು ಎರವಲಾಗಿ ತಂದು ಅಲ್ಲಿ ಪ್ರದರ್ಶಿಸಲಾಗುತ್ತಿತ್ತು. ಆರು ತಿಂಗಳಿಗೊಮ್ಮೆ ವಿಜ್ಞಾನ ಮಾದರಿಗಳ ವಿನಿಮಯ ನಡೆಯುತ್ತಿತ್ತು.





Comments