ಆಳ-ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ
- new waves technology
- Jan 6
- 1 min read

ದೇಶದ ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮಾದಕ ವಸ್ತುಗಳ ಬಳಕೆ, ಸಂಗ್ರಹ ಮತ್ತು ಕಳ್ಳಸಾಗಣೆ ವ್ಯಾಪಕವಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಕೃಷಿ, ಸಂಗ್ರಹ, ಮಾರಾಟ, ವ್ಯಾಪಾರ, ಸಾಗಣೆ, ರಫ್ತು, ಆಮದು ಮತ್ತು ಬಳಕೆ ಸಂಬಂಧದ 'ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ' (ಎನ್‌ಡಿಪಿಎಸ್) ಅಡಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಲ್ಲಿ ಡ್ರಗ್ಸ್ ಸೇವನೆ ಮತ್ತು ಸಂಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳೇ ಅಧಿಕವಾಗಿವೆ.
ಮಾದಕ ವಸ್ತುಗಳ ಬಳಕೆಯು ಯುವಕ, ಯುವತಿಯರಲ್ಲಿ ಹೆಚ್ಚಾಗುತ್ತಿದೆ. 'ಡ್ರಿಲ್'ನ ಬಯಕೆ, ಮೋಜು ಮಾಡುವ ಸಂಸ್ಕೃತಿ, ಒತ್ತಡ ಮುಂತಾದ ಕಾರಣಗಳಿಂದ ಮಾದಕ ವಸ್ತುಗಳನ್ನು ಬಳಸುವವರು ಹೆಚ್ಚಾಗುತ್ತಿದ್ದಾರೆ. ಶ್ರೀಮಂತರ ಮಕ್ಕಳು, ಸಿನಿಮಾ ಮಂದಿ, ಸೆಲಬ್ರಿಟಿಗಳು ಮಾದಕ ಪದಾರ್ಥ ಬಳಕೆದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಸೇದುವ ಪ್ರವೃತ್ತಿಯು ಯುವಕರಲ್ಲಿ ಕಂಡುಬಂದಿದೆ. ವ್ಯಸನಕ್ಕೆ ಸಿಲುಕಿ ಕೆಲವು ಯುವಕ, ಯುವತಿಯರ ಭವಿಷ್ಯವೇ ಮುರುಟಿಹೋಗಿದೆ. ಡ್ರಗ್ಸ್ ದಂಧೆಯಲ್ಲಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆಯುತ್ತಿದೆ. ಅನಕ್ಷರಸ್ಥರು, ಬಡ ಯುವಕರಿಗೆ ಹಣದ ಆಮಿಷ ಒಡ್ಡಿ ಡ್ರಗ್ಸ್ ದಂಧೆಗೆ ಎಳೆಯಲಾಗುತ್ತಿದೆ.
ರಾಜ್ಯದಲ್ಲಿ ಬೆಂಗಳೂರು ಮಾದಕ ವಸ್ತುಗಳ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ. ಮೈಸೂರು ಮತ್ತಿತರ ನಗರಗಳಲ್ಲಿಯೂ ಡ್ರಗ್ಸ್ ಸಂಸ್ಕೃತಿ ಗಮನಾರ್ಹ ಪ್ರಮಾಣದಲ್ಲಿದೆ.
ರಾಜ್ಯದಲ್ಲೇ ಡ್ರಗ್ಸ್ ಫ್ಯಾಕ್ಟರಿ: ರಾಜ್ಯಕ್ಕೆ ದೇಶ-ವಿದೇಶಗಳಿಂದ ಮಾದಕ ವಸ್ತುಗಳು ಕಳ್ಳಸಾಗಣೆ ಆಗುತ್ತಿವೆ. ಇದರ ಜತೆಗೆ, ರಾಜ್ಯದಲ್ಲಿಯೂ ಡ್ರಗ್ಸ್ ತಯಾರಿಕೆ ಮಾಡುತ್ತಿದ್ದ ಪ್ರಕರಣಗಳು ಪತ್ತೆಯಾಗಿವೆ. ಮೆಫಡ್ರನ್ ತಯಾರಿಕಾ ಜಾಲವು ಮೈಸೂರಿನಲ್ಲಿ ಕಳೆದ ಜುಲೈನಲ್ಲಿ ಪತ್ತೆಯಾಗಿತ್ತು. ಜಾಲವನ್ನು ಭೇದಿಸಿದ್ದ ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಪಡೆಯು (ಎಎನ್‌ಸಿ) ₹382 ಕೋಟಿ ಮೌಲ್ಯದ ನಿಷೇಧಿತ ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು. ಎಎನ್‌ಸಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಎರಡು ಫ್ಯಾಕ್ಟರಿಗಳನ್ನು ಪತ್ತೆ ಹಚ್ಚಿ, 55.58 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.










Comments