top of page

ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ: ಡಿ.ಕೆ. ಶಿವಕುಮಾ‌ರ್

Writer: new waves technology
new waves technology
Feb 3
1 min read

ಬೆಂಗಳೂರು: 'ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯವಂತ ಒಬ್ಬನೇ ಬಹುಮತ ಸಾಧಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ನಡುವೆಯೇ, ಅವರ ಈ ಮಾತು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ವಂದನಾ ನಿರ್ಣಯದ ಚರ್ಚೆಗೆ ಸೋಮವಾರ ಉತ್ತರ ನೀಡುತ್ತಿರುವ ಮಧ್ಯೆ ಅಧಿಕಾರ ಹಂಚಿಕೆಯ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಪಕ್ಕದ ಆಸನದಲ್ಲಿ ಕುಳಿತಿದ್ದ ಡಿ.ಕೆ. ಶಿವಕುಮಾರ್ ಕಡೆಗೆ ನೋಡಿ, 'ಸಿಎಂಗೂ ಡಿ.ಕೆ. ಶಿವಕುಮಾರ್‌ಗೂ ಜಗಳವಿದೆ ಅಂತಿದ್ದಾರೆ. ನೋಡಪ್ಪ ನೀನು ಹಾಲಂತೆ, ನಾನು ಸಕ್ಕರೆಯಂತೆ. ನಿನಗೂ ನನಗೂ ಹಾಲಾಹಲ ಅಂತಲೂ ಹೇಳ್ತಾರೆ' ಎಂದರು.

ಕುಳಿತಲ್ಲಿಂದಲೇ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ಸಮಯವೇ ಉತ್ತರ ಕೊಡುತ್ತದೆ ಬಿಡಿ' ಎಂದರು.

ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, 'ಕರೆಕ್ಟ್. ಒಂದು ಮಾತು ನೂರು ಅರ್ಥ. ಇದು ಡಿಕೆಶಿ ಸ್ಟೈಲ್. ಸಮಯ ಉತ್ತರ ಕೊಡುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ. ಆ ಸಮಯ ಯಾವಾಗ ಬರುತ್ತದೆ' ಎಂದರು.

'ಸಿದ್ದರಾಮಯ್ಯ ಅವರು ಶೇ 100ರಷ್ಟು ನನ್ನ ಜತೆಗಿದ್ದಾರೆ. ನಾವಿಬ್ಬರೂ ಪರಸ್ಪರ ಕೈಜೋಡಿಸಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ಜನಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅವರ (ಸಿದ್ದರಾಮಯ್ಯ) ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರೂ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ' ಎಂದರು.

'ನಿಮ್ಮ ಟ್ವಿಟ್ ಅರ್ಥವೇನು' ಎಂದು ಅಶೋಕ ಮತ್ತೆ ಕೇಳಿದಾಗ, 'ನೀವು ಟ್ವಿಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ' ಎಂದು ಹೇಳಿದರು.

“ನೀವು ಯಾವ ವಿಚಾರಕ್ಕೆ ತಾಳ್ಮೆ ಬಗ್ಗೆ ಮಾತನಾಡಿದ್ದೀರಿ' ಎಂದು ಅಶೋಕ ಪ್ರಶ್ನಿಸಿದರು. 'ಯಾರಾರೊ ಮಾತನಾಡುವುದಕ್ಕೆ ನಾನು ಉತ್ತರ ನೀಡಲಾಗದು. ನಮ್ಮ ಪಕ್ಷ ಹಾಗೂ ನಿಮ್ಮ ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಮುಖ್ಯಮಂತ್ರಿ ಬದಲಾದರು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ.

ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ' ಎಂದು ಸೂಚ್ಯವಾಗಿ ಹೇಳಿದರು.

ಲಾಡ್-ಅಶೋಕ ವಾಗ್ವಾದ: ಶಿವಕುಮಾರ್‌ಗೆ ಯಾವಾಗ ಸಮಯ ಬರುತ್ತದೆ ಎಂದು ಅಶೋಕ ಪ್ರಶ್ನಿಸಿದಾಗ,

ಮಾತನಾಡಲು ಸಚಿವ ಸಂತೋಷ್ ಲಾಡ್ ಮುಂದಾದರು. ಆಗ ಪ್ರತಿಕ್ರಿಯಿಸಿದ ಅಶೋಕ, 'ಯಾರೊ ನನಗೆ ಹೇಳಿದ್ದು, ಶಿವಕುಮಾರ್ ಕಡೆ 56 ಶಾಸಕರು ಇದ್ದಾರೆ ಅಂತೆ. ಆದ್ರೆ ಸಂತೋಷ್ ಲಾಡ್ ಅಂಥವರು ಬೆಳಿಗ್ಗೆ ಅಲ್ಲಿ, ರಾತ್ರಿ ಇಲ್ಲಿ ಇರ್ತಾರೆ. ಅದಕ್ಕೆ ಶಿವಕುಮಾರ್‌ಗೆ ಲಾಡ್ ಅಂಥವರನ್ನು ನೋಡಿ, ಯಾರು ಯಾರ ಕಡೆ ಇದ್ದಾರೆಂದು ಗೊಂದಲ ಆಗಿದೆಯಂತೆ” ಎಂದು ಲಾಡ್ ಅವರ ಕಾಲೆಳೆದರು.

Comments


bottom of page