top of page

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

  • Writer: new waves technology
    new waves technology
  • 5 days ago
  • 2 min read
ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಚೀನಾಪರ ನಿಲುವು ಹಾಗೂ ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಗಡಿ ವಿವಾದದಂತಹ ವಿಷಯಗಳು ಸಂಬಂಧಗಳಲ್ಲಿ ಬಿರುಕು ಮೂಡಿಸಿದ್ದವು.
ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಚೀನಾಪರ ನಿಲುವು ಹಾಗೂ ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಗಡಿ ವಿವಾದದಂತಹ ವಿಷಯಗಳು ಸಂಬಂಧಗಳಲ್ಲಿ ಬಿರುಕು ಮೂಡಿಸಿದ್ದವು.

ಕಠ್ಮಂಡು: ನೇಪಾಳ ಸರ್ಕಾರದಿಂದ ಭಾರತಕ್ಕೆ ಅಪಮಾನವಾಗಿದ್ದು, ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರನ್ನು ಭೇಟಿಯಾಗಲು ಪ್ರಧಾನಿ ಬಾಲೇನ್ ಶಾ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಭಾರತ ಮತ್ತು ನೇಪಾಳ ದೇಶಗಳ ಸಂಬಂಧ ಕೆಳದ ಕೆಲ ವರ್ಷಗಳಿಂದ ಉದ್ವಿಗ್ನತೆಯಲ್ಲಿದೆ. ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಚೀನಾಪರ ನಿಲುವು ಹಾಗೂ ಕಾಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಗಡಿ ವಿವಾದದಂತಹ ವಿಷಯಗಳು ಸಂಬಂಧಗಳಲ್ಲಿ ಬಿರುಕು ಮೂಡಿಸಿದ್ದವು.

ಇದೀಗ ಪ್ರಧಾನಿ ಬಾಲೇನ್ ಶಾ (Balen Shah) ಅವರ ಆಡಳಿತದಲ್ಲಿ ಕೆಲವು ನೀತಿ ನಿರ್ಧಾರಗಳಿಂದ ಸಂಬಂಧಗಳು ಮತ್ತಷ್ಟು ಹದಗೆಡುತ್ತಿರುವುದಾಗಿ ವರದಿಗಳು ಹೇಳುತ್ತಿವೆ.

ಹೊಸ ವಿವಾದವೇನು?

ಹೊಸ ವಿವಾದದ ಪ್ರಕಾರ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರನ್ನು ಭೇಟಿಯಾಗಲು ಬಾಲೇನ್ ಶಾ ನಿರಾಕರಿಸಿದ್ದಾರಂತೆ. ಹುದ್ದೆಯ ಮಟ್ಟದಲ್ಲಿ ಅಂತರವಿರುವುದರಿಂದ ವಿದೇಶಾಂಗ ಸಚಿವರಿಗಿಂತ ಕೆಳಮಟ್ಟದ ಅಧಿಕಾರಿಗಳನ್ನು ಭೇಟಿಯಾಗಲು ಅವರು ಆಸಕ್ತಿ ತೋರಲಿಲ್ಲ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯ ನಂತರ ಮಿಶ್ರಿಯವರ ನೇಪಾಳ ಪ್ರವಾಸವನ್ನು ಭಾರತ ರದ್ದುಗೊಳಿಸಿದೆ ಎಂದು ಹೇಳಲಾಗಿದೆ. ವಿಶೇಷವಾಗಿ, ಕೈಲಾಶ ಮಾನಸಸರೋವರ ಯಾತ್ರೆ ಕುರಿತ ವಿವಾದದ ನಡುವೆ ಬಲೇನ್ ಶಾ ಸರ್ಕಾರದ ಆದ್ಯತೆಗಳ ಬಗ್ಗೆ ಚರ್ಚಿಸಲು ನೇಪಾಳದ ವಿದೇಶಾಂಗ ಕಾರ್ಯದರ್ಶಿ ಅಮೃತ ಬಹಾದುರ್ ರೈ ಅವರು ಮಿಶ್ರಿಯನ್ನು ಆಹ್ವಾನಿಸಿದ್ದರು. ತಮ್ಮ ಭೇಟಿಯ ವೇಳೆ ಮಿಶ್ರಿಯವರು ಪ್ರಧಾನಿ ಬಾಲೇನ್ ಶಾ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸುವ ನಿರೀಕ್ಷೆಯೂ ಇತ್ತು.

ಕಳೆದ ವಾರ ದಕ್ಷಿಣ ಮತ್ತು ಮಧ್ಯ ಏಷ್ಯಾ ಕುರಿತ ಅಮೆರಿಕದ ವಿಶೇಷ ದೂತ Sergio Gor ನೇಪಾಳಕ್ಕೆ ಭೇಟಿ ನೀಡಿದಾಗ, ಅವರು ವಿದೇಶಾಂಗ ಸಚಿವ ಶಿಶಿರ್ ಕನಾಲ್ ಹಾಗೂ ಹಣಕಾಸು ಸಚಿವ ಸ್ವರ್ಣಿ ವಾಗ್ಲೆ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ, ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ S Paul Kapur ಅವರನ್ನು ಭೇಟಿಯಾಗುವುದಕ್ಕೂ ಬಾಲೇನ್ ಶಾ ಹಿಂದೆ ನಿರಾಕರಿಸಿದ್ದರೆಂದು ವರದಿಯಾಗಿದೆ.

ದೆಹಲಿಯಲ್ಲಿ ಶೃಂಗಸಭೆ

ಉದ್ವಿಗ್ನತೆಯ ನಡುವೆಯೂ ಭಾರತ ನೇಪಾಳದ ನಾಯಕರನ್ನು ಜುಲೈನಲ್ಲಿ ದೆಹಲಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಶೃಂಗಸಭೆಗೆ ಆಹ್ವಾನಿಸಿದೆ. ಜೂನ್ 1ರಂದು ಭಾರತ ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ. ವರದಿಗಳ ಪ್ರಕಾರ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಆದರೆ ಇದಕ್ಕೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್‌ನಲ್ಲಿ ‘ಪ್ರಾಜೆಕ್ಟ್ ಟೈಗರ್’ಗೆ 50 ವರ್ಷ ಪೂರೈಸಿದ ಹಿನ್ನೆಲೆ International Big Cat Alliance ಅನ್ನು ಪ್ರಾರಂಭಿಸಿದ್ದರು. ಈ ವೇದಿಕೆ ಹುಲಿ, ಸಿಂಹ, ಚಿರತೆ, ಚೀತಾ, ಹಿಮ ಚಿರತೆ, ಪೂಮಾ ಮತ್ತು ಜಾಗ್ವಾರ್ ಸೇರಿದಂತೆ ಏಳು ಪ್ರಮುಖ ಕಾಡು ಬೆಕ್ಕು ಜಾತಿಗಳ ಸಂರಕ್ಷಣೆಗೆ ಜಾಗತಿಕ ಸಹಕಾರ ಒದಗಿಸುತ್ತದೆ.

ಇತ್ತೀಚೆಗೆ ಭಾರತ ಮತ್ತು ಚೀನಾ ಕೈಲಾಶ ಮಾನಸಸರೋವರ ಯಾತ್ರೆಯನ್ನು ಮರು ಆರಂಭಿಸಲು ಒಪ್ಪಿಕೊಂಡಿವೆ. ಇದು ಹಿಂದೂ ಭಕ್ತರಿಗೆ ಅತ್ಯಂತ ಪವಿತ್ರ ಯಾತ್ರೆಯಾಗಿದೆ. ಆದರೆ ನೇಪಾಳ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಯಾತ್ರೆ ಲಿಪುಲೆಖ್ ಪಾಸ್ ಮೂಲಕ ಸಾಗುತ್ತದೆ ಮತ್ತು ಅದು 1816ರ ಸುಗೌಲಿ ಒಪ್ಪಂದದ ಪ್ರಕಾರ ನೇಪಾಳದ ಪ್ರದೇಶವೆಂದು ಕಠ್ಮಂಡು ಹೇಳುತ್ತಿದೆ.

ಉತ್ತರಾಖಂಡದ ಲಿಪುಲೆಖ್ ಪಾಸ್ ಮೂಲಕ ನಡೆಯುವ ಕೈಲಾಶ ಮಾನಸಸರೋವರ ಯಾತ್ರೆಗೆ ನೇಪಾಳ ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಭಾರತ ತಳ್ಳಿಹಾಕಿದೆ. ನೇಪಾಳದ ಗಡಿ ಹಕ್ಕುಗಳ ವಿಸ್ತರಣೆಯನ್ನು “ಏಕಪಕ್ಷೀಯ ಹಾಗೂ ಅಸಂಗತ” ಎಂದು ಭಾರತ ವಿವರಿಸಿದೆ. ಭಾರತದ ಪ್ರತಿಕ್ರಿಯೆಯ ನಂತರ, ಈ ವಿಷಯವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಲು ಸಿದ್ಧವಿದ್ದೇವೆ ಎಂದು ನೇಪಾಳ ತಿಳಿಸಿದೆ.

“ಲಿಪುಲೆಖ್ ಕುರಿತು ನಮ್ಮ ನಿಲುವನ್ನು ನಾವು ಈಗಾಗಲೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದೇವೆ. ಭಾರತ ಮತ್ತು ಚೀನಾ ನಡುವೆ ನೇಪಾಳದ ಪ್ರದೇಶವಾದ ಲಿಪುಲೆಖ್ ಮೂಲಕ ಪ್ರಸ್ತಾಪಿತ ಕೈಲಾಶ ಮಾನಸಸರೋವರ ಯಾತ್ರೆಯ ಕುರಿತೂ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ,” ಎಂದು ನೇಪಾಳ ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಲಾಲ್ ಬಹದ್ದೂರ್ ಚೇಟ್ರಿ ಹೇಳಿದ್ದಾರೆ.

Comments


bottom of page