top of page

ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ: ಕಾಂಪೌಂಡ್‌ ಜಿಗಿದು ಜೀವ ಉಳಿಸಿಕೊಂಡ ಕುಟುಂಬ

  • Writer: new waves technology
    new waves technology
  • Dec 23, 2025
  • 1 min read

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ತೀವ್ರಗೊಂಡಿದ್ದು, ದುಷ್ಕರ್ಮಿಗಳ ಗುಂಪು ಹಿಂದೂಗಳಿಗೆ ಸೇರಿದ ಮನೆಯೊಂದಕ್ಕೆ ಬೆಂಕಿ ಹಚ್ಚಿರುವ ಸುದ್ದಿ ಹೊರಬಿದ್ದಿದೆ. ಈ ದುಷ್ಕೃತ್ಯದಲ್ಲಿ ಮನೆಯಲ್ಲಿದ್ದ ಸಾಕು ಪ್ರಾಣಿಗಳು ಮೃತಪಟ್ಟಿದ್ದು, ಮನೆಯ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿವೆ. ಅದೃಷ್ಟವಶಾತ್, ಕುಟುಂಬ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದೇ ಪ್ರದೇಶದಲ್ಲಿ ಹಿಂದೂಗಳನ್ನು ಬೆದರಿಸುವ ಬ್ಯಾನರ್ ಸಹ ಪತ್ತೆಯಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹಿಂದೂಗಳು ಇಸ್ಲಾಂ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೂಡಲೇ ಅದನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಚಟ್ಟೋಗ್ರಾಮ್‌ನಲ್ಲಿ ನೆಲೆಸಿರುವ ಜಯಂತಿ ಸಂಘ ಮತ್ತು ಬಾಬು ಶುಕುಶಿಲ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆ ಕ್ಷಣಮಾತ್ರದಲ್ಲಿ ಮನೆಯ ಸುತ್ತಲಿನ ಕಾಂಪೌಂಡ್ ಹಾರಿದ ಕುಟುಂಬ ಸದಸ್ಯರು ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಆದರೂ, ಮನೆಯಲ್ಲಿದ್ದ ವಸ್ತುಗಳು ನಾಶವಾಗಿದ್ದು, ಸಾಕುಪ್ರಾಣಿಗಳು ಮೃತಪಟ್ಟಿವೆ.

'ಈ ಪ್ರದೇಶದ ಹಿಂದೂಗಳಿಗೆ ಹೇಳುವುದೇನೆಂದರೆ, ನಿಮ್ಮ ಮೇಲೆ ನಾವು ನಿಗಾ ಇರಿಸಿದ್ದೇವೆ.ನೀವು ಇಸ್ಲಾಂ ಧರ್ಮದ ಮತ್ತು ಮುಸ್ಲಿಂ ಸಮುದಾಯ ವಿರುದ್ಧದ ಚಟುವಟಿಕೆಯ ಆರೋಪಿಗಳಾಗಿದ್ದೀರಿ. ನೀವು ಈ ಕೂಡಲೇ ನಿಮ್ಮ ಚಳವಳಿ, ಸಭೆ ಮತ್ತು ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲವಾದರೆ, ಗಂಭೀರ ಪರಿಣಾಮ ಎದುರಿಸುತ್ತೀರಿ' ಎಂದು ಬ್ಯಾನರ್‌ನಲ್ಲಿ ಕೈಬರಹದಲ್ಲಿ ಬರೆಯಲಾಗಿದೆ.

ಈ ನಿರ್ದೇಶನಗಳನ್ನು ಪಾಲಿಸುವಲ್ಲಿ ಹಿಂದೂ ಸಮುದಾಯ ವಿಫಲವಾದರೆ, ನಿಮ್ಮ ಮನೆಗಳು, ಆಸ್ತಿ ಮತ್ತು ಉದ್ಯಮಗಳನ್ನು ನಾಶ ಮಾಡುತ್ತೇವೆ. ನಿಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲಾಗಿದೆ.

Comments


bottom of page