top of page

ಬೆಂಗಳೂರು ಮೆಟ್ರೊ ಪ್ರಯಾಣ ದರ ಶೇ 5ರಷ್ಟುಏರಿಕೆ: ಸರ್ಕಾರದ ಸಮ್ಮತಿ

  • Writer: new waves technology
    new waves technology
  • 18 hours ago
  • 1 min read

ಬೆಂಗಳೂರು: ಒಂದು ವರ್ಷದ ಹಿಂದಷ್ಟೇ 'ನಮ್ಮ ಮೆಟ್ರೊ' ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.

ಇದೇ 9ರ ಸೋಮವಾರ ದಿಂದಲೇ ಹೊಸ ದರ ಜಾರಿಗೆ ಬರಲಿದೆ. ದರವು ಕನಿಷ್ಠ ₹1 ಹಾಗೂ ಗರಿಷ್ಠ ₹5ರಷ್ಟು ಹೆಚ್ಚಳವಾಗಲಿದೆ. ಕನಿಷ್ಠ ₹10 ಇರುವ ದರ ₹11ಕ್ಕೆ, ಗರಿಷ್ಠ ₹90 ಇರುವ ದರ ₹95ಕ್ಕೆ ಏರಲಿದೆ.

ಬಿಎಂಆರ್‌ಸಿಎಲ್ ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್‌ಎಫ್‌ಸಿ) 2025ರಲ್ಲಿ ಶಿಫಾರಸು ಮಾಡಿತ್ತು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್‌ಸಿಎಲ್ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಶೇ 5ರಷ್ಟು ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರವು ಸೋಮವಾರ ಅನುಮೋದನೆ ನೀಡಿದೆ.

ಮಾಹಿತಿ ನೀಡದ ಅಧಿಕಾರಿಗಳು: ದರ ಹೆಚ್ಚಳ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಖಚಿತ ಮಾಹಿತಿ ನೀಡದೇ ಜಾರಿಕೊಂಡಿದ್ದಾರೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಅವರು ಕರೆ ಸ್ವೀಕರಿಸಿಲ್ಲ. ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ರಾಜ್ಯ ಸರ್ಕಾರಕ್ಕೆ ಅನುಮೋದನೆ ಕಳುಹಿಸಿರುವುದು ಮತ್ತು ಅದಕ್ಕೆ ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ದರ ಹೆಚ್ಚಳವೆಷ್ಟು: ಶೇ 5 ಹೆಚ್ಚಳ ಮಾಡಿದಾಗ ₹30 ದರ ಇದ್ದಿದ್ದು ₹31.5 ಆಗಬೇಕು. ಆದರೆ, ಚಿಲ್ಲರೆಗೆ ಸಮಸ್ಯೆಯಾಗಬಾರದು ಎಂದು ಪೈಸೆ ಇರುವುದನ್ನು ಹತ್ತಿರ ರೂಪಾಯಿಗೆ (ರೌಂಡ್ ಫಿಗರ್) ನಿಗದಿ ಮಾಡಲಾಗುತ್ತದೆ ಹಾಗಾಗಿ ₹32 ನೀಡಬೇಕಾಗುತ್ತದೆ.

ಶೇ 101.5ರಷ್ಟು ಹೆಚ್ಚಿಸಿದ್ದ ಬಿಎಂಆರ್‌ಸಿಎಲ್: ಶೇ 51.55ರಷ್ಟು ಹೆಚ್ಚಳ ಮಾಡುವಂತೆ ದರ ನಿಗದಿ ಸಮಿತಿ ಕಳೆದ

ವರ್ಷ ಶಿಫಾರಸು ಮಾಡಿತ್ತು. ಆದರೆ, ಬಿಂಆರ್‌ಸಿಎಲ್ ಶೇ 101.5ರಷ್ಟು ಹೆಚ್ಚಳ ಮಾಡಿ 2025ರ ಫೆ.9 ರಂದು ಜಾರಿ ಮಾಡಿತ್ತು. ಪ್ರಯಾಣಿಕರಿಂದ ವಿರೋಧ ಬಂದಿದ್ದರಿಂದ ಮತ್ತು ಮೆಟ್ರೊ ಪ್ರಯಾಣಿಕರ ಸಂಖ್ಯೆ ದಿಢೀ‌ರ್ ಕುಸಿತ ಆಗಿದ್ದರಿಂದ ನಾಲ್ಕು ದಿನಗಳ ಬಳಿಕ ಶೇ 30ರಷ್ಟು ದರ ಇಳಿಸಿದ್ದರಿಂದ ಹೆಚ್ಚಳವು ಶೇ 71.50ರಷ್ಟಾಗಿತ್ತು.

ಇಂಧನ ವೆಚ್ಚ, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ, ಇತರ ವೆಚ್ಚಗಳನ್ನು ಹಿಂದಿನ ವರ್ಷಕ್ಕೆ ಹೋಲಿಸಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಅದರ ಸರಾಸರಿಯಂತೆ ಪ್ರಯಾಣ ದರ ಹೆಚ್ಚಿಸಬೇಕು. ಇಲ್ಲವೇ ವಾರ್ಷಿಕ ಶೇ 5ರಷ್ಟು ಹೆಚ್ಚಳ ಮಾಡಬೇಕು. ಈ ಎರಡರಲ್ಲಿ ಕಡಿಮೆ ಯಾವುದೋ ಅದನ್ನೇ ಪಾಲಿಸಬೇಕು ಎಂದು ದರ ನಿಗದಿ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು. ಈ ಶಿಫಾರಸು ಅನ್ನು ಮಾತ್ರ ಪಾಲಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂದು ನಮ್ಮ ಮೆಟ್ರೊ ಮೂಲಗಳು ತಿಳಿಸಿವೆ.

Comments


bottom of page