top of page

ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು

Writer: new waves technology
new waves technology
Jan 3
1 min read

ಬಳ್ಳಾರಿ: 'ನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (28) ಅವರ ದೇಹದಲ್ಲಿ ಪತ್ತೆಯಾದ ಗುಂಡು, ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಕಡೆಯ ಖಾಸಗಿ ಅಂಗರಕ್ಷಕರದ್ದೇ' ಎಂದು ಪೊಲೀಸ್ ಇಲಾಖೆ ನಿಕಟ ಮೂಲಗಳಿಂದ ಖಚಿತವಾಗಿದೆ.

ರಾಜಶೇಖರ ಅವರ ಶವದ ಮರಣೋತ್ತರ ಪರೀಕ್ಷೆ ಬಳ್ಳಾರಿಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಬಿಎಂಸಿಆರ್-ವಿಮ್ಸ್) ನಡೆಯಿತು. 'ದೇಹದಲ್ಲಿ '12 ಎಂಎಂ-ಸಿಂಗಲ್‌ಬೋರ್'ನ ಗುಂಡಿನ 'ವಾರ್ಡ್' ಪತ್ತೆಯಾಗಿದೆ. ಅದು ಶಾಸಕ ನಾರಾ ಭರತ್ ರೆಡ್ಡಿ ಅವರ ಕಡೆಯವರ ಬಂದೂಕಿನ ಗುಂಡಿನ ಜೊತೆ ಹೊಂದಾಣಿಕೆ ಆಗುತ್ತಿದೆ' ಎಂದು ಮರಣೋತ್ತರ ಪರೀಕ್ಷೆ ಕುರಿತು ಮಾಹಿತಿಯುಳ್ಳ ಅಧಿಕಾರಿಯೊಬ್ಬರು ತಿಳಿಸಿದರು.

ವಿಧಿವಿಜ್ಞಾನ ತಜ್ಞರು ಹಿಂದಿನ ದಿನ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ವಸ್ತುಗಳು ಹಾಗೂ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ರಾಜಶೇಖರ ಅವರ ದೇಹದಲ್ಲಿ ಸಿಕ್ಕ ವಸ್ತುಗಳನ್ನು ನಾರಾ ಭರತ್ ರೆಡ್ಡಿ ಮತ್ತು ಆಪ್ತರ ಅಂಗರಕ್ಷಕರಿಂದ ಜಪ್ತಿ ಮಾಡಿಕೊಂಡ ಐದು ಬಂದೂಕುಗಳ ಗುಂಡುಗಳ ಜೊತೆ ಹೋಲಿಕೆ ಮಾಡಲಾಗಿದ್ದು, ಗುಂಡು ಭರತ್ ರೆಡ್ಡಿ ಆಪ್ತರ ಅಂಗರಕ್ಷಕರ ಬಂದೂಕಿನಿಂದಲೇ ಸಿಡಿದಿತ್ತು ಎಂಬುದು ದೃಢವಾಗಿದೆ ಎಂದು ಹೇಳಾಗಿದೆ.

ಇದಕ್ಕೆ ಪೂರಕ ಎಂಬಂತೆ ಭರತ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ಜನಾರ್ದನ ರೆಡ್ಡಿ ಮನೆಯತ್ತ ಮತ್ತು ಇತರ ಕಡೆ ಗುಂಡು ಹಾರಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.


Comments


bottom of page