ಭೀಮಣ್ಣ ಖಂಡ್ರೆ: ಹೋರಾಟದ ಕೆಚ್ಚು, ಸ್ವಾಭಿಮಾನದ ಕಿಚ್ಚು...

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರೂ ಆದ ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಇಡೀ ವ್ಯಕ್ತಿತ್ವವನ್ನು ವರ್ಣಿಸಲು ಈ ಮೇಲಿನ ಸಾಲು ಸಾಕು.
ಸಮಾಜವಾದಿ ವಿಚಾರಧಾರೆಯ ಜಯಪ್ರಕಾಶ ನಾರಾಯಣ, ರಾಮ ಮನೋಹರ್ ಲೋಹಿಯಾ, ಅಶೋಕ್ ಮೆಹ್ರಾ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ಖಂಡ್ರೆಯವರು ಅದನ್ನೇ ಮೈಗೂಡಿಸಿಕೊಂಡಿದ್ದರು. ಜೀವನದುದ್ದಕ್ಕೂ ಅದರಂತೆ ಬದುಕಿ ತೋರಿಸಿದರು.
ಇದನ್ನೂ ಓದಿ: ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ
ಯೌವನಾವಸ್ಥೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಣೆಗೊಂಡಿದ್ದ ಅವರು, ಅಂದಿನ ಹೈದರಾಬಾದ್ ಕರ್ನಾಟಕದ ರಜಾಕಾರರ ದೌರ್ಜನ್ಯದ ವಿರುದ್ಧ ಸೆಟೆದು ನಿಂತು, ಹೋರಾಟದಲ್ಲಿ ದುಮುಕಿದರು.
ಅದೇ ಅವರಿಗೆ ಆನಂತರ ಪ್ರಜಾ ಸಮಾಜವಾದಿ ಪಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. 1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. ಆನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದರು. 1962, 1967, 1978 ಹಾಗೂ 1983ರಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾದರು. 1988 ಮತ್ತು 1994ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದರು.





Comments