top of page

ಭಾರತ-ಪಾಕ್ ಯುದ್ಧ ಇತ್ಯರ್ಥ: ವ್ಯಾಪಾರ ಒಪ್ಪಂದ ಬಳಿಕವೂ ಟ್ರಂಪ್‌ ಅದೇ ರಾಗ!

Writer: new waves technology
new waves technology
Feb 6
1 min read

ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧ ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪುನರುಚ್ಚರಿಸಿದ್ದಾರೆ.

ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಟ್ಟಿರುವ ಬೆನ್ನಲ್ಲೇ ಟ್ರಂಪ್ ಮಗದೊಮ್ಮೆ ಭಾರತ-ಪಾಕ್ ಸಂಘರ್ಷವನ್ನು ಇತ್ಯರ್ಥಗೊಳಿಸಿರುವುದಾಗಿ ಹೇಳಿದ್ದಾರೆ.

ಈ ಹೇಳಿಕೆಯನ್ನು ಒಂದೇ ದಿನದಲ್ಲಿ ಟ್ರಂಪ್ ಎರಡು ಸಲ ಪುನರಾವರ್ತಿಸಿದ್ದಾರೆ.

'ಒಂದು ವರ್ಷದ ಅವಧಿಯಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಕಾಂಬೋಡಿಯಾ-ಥಾಯ್ಲೆಂಡ್, ಕೊಸೊವೊ-ಸರ್ಬಿಯ, ಭಾರತ-ಪಾಕಿಸ್ತಾನ, ಇಸ್ರೇಲ್-ಇರಾನ್, ಅರ್ಮೇನಿಯಾ ಹಾಗೂ ಅಜರ್‌ಬೈಜಾನ್' ಎಂದು ನ್ಯಾಷನಲ್ ಪ್ರೇಯರ್ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದ್ದಾರೆ.

ಬಳಿಕ ಟ್ರುತ್ ಸಾಮಾಜಿಕ ಮಾಧ್ಯಮದಲ್ಲೂ ಟ್ರಂಪ್ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

'ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ. ನನ್ನ ಮೊದಲ ಅವಧಿಯಲ್ಲಿ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ನವೀಕರಣ ಸೇರಿದಂತೆ ಸಂಪೂರ್ಣವಾಗಿ ಪುನರ್ ನಿರ್ಮಿಸಿದ್ದೇನೆ. ಸ್ಪೇಸ್ ಫೋರ್ಸ್ ಸಹ ಸೇರಿಸಿದ್ದೇನೆ. ಮಿಲಿಟರಿಯನ್ನು ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ರೂಪಿಸುತ್ತಿದ್ದೇನೆ. ಭಾರತ-ಪಾಕಿಸ್ತಾನ ಸೇರಿದಂತೆ ಅನೇಕ ನ್ಯೂಕ್ಲಿಯರ್ ಯುದ್ಧಗಳನ್ನು ನಿಲ್ಲಿಸಿದ್ದೇನೆ' ಎಂದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿದ್ದೇನೆ ಎಂದು 90ಕ್ಕೂ ಹೆಚ್ಚು ಸಲ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

Comments


bottom of page