ಮಹಾತ್ಮಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 78ನೇ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ದೆಹಲಿಯ ರಾಜ್‌ಘಾಟ್‌ನಲ್ಲಿನ ಮಹಾತ್ಮಗಾಂಧಿ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ.
'ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಪೂಜ್ಯ ಬಾಪು ಅವರು ಯಾವಾಗಲೂ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಒತ್ತು ನೀಡಿದ್ದರು. ಇದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ನಮ್ಮ ಸಂಕಲ್ಪದ ಮೂಲಾಧಾರವಾಗಿದೆ. ಅವರ (ಗಾಂಧೀಜಿ) ವ್ಯಕ್ತಿತ್ವ ಮತ್ತು ಸೃಜನಶೀಲತೆಯು ದೇಶವಾಸಿಗಳಿಗೆ ಕರ್ತವ್ಯದ ಹಾದಿಯಲ್ಲಿ ನಡೆಯಲು ಯಾವಾಗಲೂ ಸ್ಫೂರ್ತಿ ನೀಡುತ್ತದೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಮಹಾತ್ಮ ಗಾಂಧಿ ವ್ಯಕ್ತಿಯಷ್ಟೇ ಅಲ್ಲ. ಸಾಮ್ರಾಜ್ಯಶಾಹಿ, ದ್ವೇಷಪೂರಿತ ಸಿದ್ಧಾಂತ, ಸರ್ವಾಧಿಕಾರವನ್ನು ನಿರ್ಮೂಲನೆ ಮಾಡುವ ಪ್ರಬಲ ಆಲೋಚನೆಯಾಗಿದ್ದಾರೆ. ರಾಷ್ಟ್ರಪಿತರು ಸ್ವಾತಂತ್ರ್ಯದ ಜತೆಗೆ 'ಅಧಿಕಾರ ಬಲಕ್ಕಿಂತ ಸತ್ಯದ ಶಕ್ತಿ ದೊಡ್ಡದು, ಅಹಿಂಸೆ ಮತ್ತು ಧೈರ್ಯವು ಹಿಂಸೆ ಹಾಗೂ ಭಯಕ್ಕಿಂತ ದೊಡ್ಡದು' ಎಂಬ ತತ್ವವನ್ನು ಬಿಟ್ಟುಹೋಗಿದ್ದಾರೆ' ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಗಾಂಧೀಜಿಯವರು ಭಾರತೀಯರ ಆತ್ಮದಲ್ಲಿ ಅಮರರಾಗಿರುವುದರಿಂದ ಅವರ ಚಿಂತನೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಬಾಪು ಅವರು ಹುತಾತ್ಮರಾದ ದಿನದಂದು ಅವರಿಗೆ ವಿನಮ್ರ ಗೌರವ ನಮನಗಳು' ಎಂದೂ ರಾಹುಲ್ ತಿಳಿಸಿದ್ದಾರೆ.





Comments