ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ
- new waves technology
- 10 hours ago
- 1 min read

ಮಂಗಳೂರು: 'ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರ ಮಾತನ್ನು ಗೌರವದಿಂದ ಸ್ವೀಕರಿಸುವೆ' ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಪುತ್ತೂರಿನಲ್ಲಿ ಪಕ್ಷದ ಕಚೇರಿಗೆ ಭೂಮಿಪೂಜೆ ನೆರವೇರಿಸಲು ಬಂದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.
ಐದು ವರ್ಷ ತಮ್ಮ ತಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಅದಕ್ಕೆ ಹೈಕಮಾಂಡ್ ಒಪ್ಪಿದ್ದು ಹಸಿರು ನಿಶಾನೆಯನ್ನೂ ತೋರಿಸಿದೆ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಹೇಳಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಡಿಕೆಶಿ 'ಯತೀಂದ್ರ ಮಾತಿಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ. ಏನು ಹೇಳಬೇಕೋ ಅದನ್ನು ದೆಹಲಿಯಲ್ಲಿ ಹೇಳುತ್ತೇನೆ' ಎಂದರು.
ಪುತ್ತೂರು ಕಾಂಗ್ರೆಸ್ ಕಚೇರಿ ಶಿಲಾನ್ಯಾಸದ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ಮುಖಂಡರ ಹೆಸರು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು 'ಕಾಂಗ್ರೆಸ್ ಜಾತಿ ಮೇಲಲ್ಲ, ನೀತಿಮೇಲೆ ರಾಜಕಾರಣ ಮಾಡುವುದು. ನಮಗೆ ಎಲ್ಲ ಜಾತಿ, ಧರ್ಮದವರೂ ಬೇಕು. ಅಸೂಯೆ ಇರುವವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಜಾಗ ಸಿಕ್ಕಿದರೆ ಕಚೇರಿಗಳನ್ನು ಯಾರು ಬೇಕಾದರೂ ಕಟ್ಟಿಕೊಳ್ಳಲಿ' ಎಂದರು.
'ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 10ರಂದು 6 ವರ್ಷ ತುಂಬುತ್ತದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ 100 ಕಚೇರಿಗಳಿಗೆ ಭೂಮಿಪೂಜೆ ಮಾಡಲು ನಿರ್ದೇಶನ ನೀಡಲಾಗಿದೆ. ಇದಕ್ಕೆ ಎಐಸಿಸಿ ಒಪ್ಪಲಿ, ಬಿಡಲಿ. ನಾನಂತೂ ಸಿದ್ಧನಿದ್ದೇನೆ' ಎಂದು ಶಿವಕುಮಾರ್ ಹೇಳಿದರು.










Comments