ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ: ಆಂಧ್ರ-ಬಿಹಾರಕ್ಕೆ ಭಾರಿ ಅನುದಾನ

ನವದೆಹಲಿ: ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕಿದ್ದು ಚಿಕ್ಕಾಸು. ಸರ್ಕಾರಕ್ಕೆ ಊರುಗೋಲು ಆಗಿರುವ ಮಿತ್ರರ ಸರ್ಕಾರ ಇರುವ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಕೇಂದ್ರ ಸರ್ಕಾರ ಭರಪೂರ ಅನುದಾನ ನೀಡಿದೆ. ಕೇಂದ್ರ ಸರ್ಕಾರವು ಸಚಿವ ಸಂಪುಟದ ನಿರ್ಧಾರಗಳ ಮೂಲಕ ಈ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ ₹1 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟಿದೆ.
ಕಳೆದ 17 ತಿಂಗಳುಗಳಲ್ಲಿ ಕೇಂದ್ರ ಸಚಿವ ಸಂಪುಟವು ರಾಜ್ಯದ ಎರಡು ಯೋಜನೆಗಳಿಗಷ್ಟೇ ಅನುಮೋದನೆ ಕೊಟ್ಟಿದೆ. ₹3,432 ಕೋಟಿ ಮೊತ್ತದ ಬಳ್ಳಾರಿ-ಚಿಕ್ಕಜಾಜೂರು ರೈಲು ಮಾರ್ಗ ಹಾಗೂ ಬೆಂಗಳೂರಿನ ನಮ್ಮ ಮೆಟ್ರೊ ಮೂರನೇ ಹಂತದ ಯೋಜನೆಗೆ ಕೇಂದ್ರದಿಂದ ಹಸಿರು ನಿಶಾನೆ ಸಿಕ್ಕಿದೆ. ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದ 19 ತಿಂಗಳುಗಳು ಕಳೆದ ಬಳಿಕವಷ್ಟೇ ಮೆಟ್ರೊ ಯೋಜನೆಗೆ ಅನುಮತಿ ನೀಡಿತ್ತು. ಇದರಲ್ಲಿ ಕೇಂದ್ರದ ಪಾಲು ಶೇ 20ರಷ್ಟು.
ಮಿತ್ರ ಪಕ್ಷವನ್ನು ಸಂತೃಪ್ತಿಪಡಿಸಲು ಕೇಂದ್ರವು ಆಂಧ್ರ ಪ್ರದೇಶಕ್ಕೆ ಮೊಗೆ ಮೊಗೆದು ಯೋಜನೆಗಳನ್ನು ನೀಡಿದೆ. ಆಂಧ್ರ ಪ್ರದೇಶದಲ್ಲಿ 2025ರ ಜನವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, '2024ರ ಜೂನ್‌ನಿಂದ ಇಲ್ಲಿಯವರೆಗೆ ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರವು ₹3 ಲಕ್ಷ ಕೋಟಿ ಆರ್ಥಿಕ ಸಹಾಯ ನೀಡಿದೆ' ಎಂದು ಹೇಳಿಕೊಂಡಿದ್ದರು. ಸಚಿವರ ಈ ಮಾತೇ ನೆರೆ ರಾಜ್ಯದ ಮೇಲಿನ ಪ್ರೀತಿಗೆ ಸಾಕ್ಷಿ. ಇದರಲ್ಲಿ ತೆರಿಗೆ ಪಾಲು, ಸಹಾಯಾನುದಾನ ಹಾಗೂ ಕೇಂದ್ರದ ಪ್ರಾಯೋಜಿತ ಯೋಜನೆಗಳು ಸೇರಿಲ್ಲ. ಮತ್ತೊಂದೆಡೆ, ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಹಾಗೂ ಚಂದ್ರಬಾಬು ನಾಯ್ಡು ಅವರ ಚತುರ ನಡೆಯಿಂದಾಗಿ ಗೂಗಲ್‌ನ ಎಐ ಡೇಟಾ ಸೆಂಟರ್ ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗಲಿದೆ. ₹87,250 ಕೋಟಿ ಮೊತ್ತದ ಈ ಕೇಂದ್ರ ಸ್ಥಾಪನೆಗಾಗಿ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕರ್ನಾಟಕದ 24 ಇಲಾಖೆಗಳ ಪ್ರಸ್ತಾವಗಳು ಅನುದಾನಕ್ಕಾಗಿ ಹಾಗೂ ಅನುಮೋದನೆಗಾಗಿ ವರ್ಷಗಳಿಂದ ಕೇಂದ್ರದ ವಿವಿಧ ಸಚಿವಾಲಯಗಳ ಮುಂದೆ ಇವೆ. ಈ ಪ್ರಸ್ತಾವಗಳಿಗೆ ಸಚಿವಾಲಯಗಳು ನೂರಾರು ಬಾರಿ ತಕರಾರುಗಳನ್ನು ಎತ್ತಿವೆ. ರಾಜ್ಯದ ಇಲಾಖೆಗಳು ಉತ್ತರವನ್ನೂ ಕೊಟ್ಟಿವೆ. ಇವುಗಳಲ್ಲಿ ಒಂದೇ ಒಂದು ಪ್ರಸ್ತಾವಕ್ಕೂ ಇತ್ತೀಚೆಗೆ ಅನುಮೋದನೆ ಸಿಕ್ಕಿಲ್ಲ. ವಿಶೇಷವೆಂದರೆ, ಎನ್‌ಡಿಎ ಮೈತ್ರಿಕೂಟದಲ್ಲಿ ಆಂಧ್ರದ ಟಿಡಿಪಿ, ಬಿಹಾರದ ಜೆಡಿಯು ಹಾಗೂ ಕರ್ನಾಟಕದ ಜೆಡಿಎಸ್ ಪಾಲುದಾರರು.





Comments