ರಾಜ್ಯಪಾಲರ ಅಂಗಳಕ್ಕೆ ಮತ್ತೆ 'ಒಳ ಮೀಸಲು'
- new waves technology
- Feb 4
- 1 min read

ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರೂಪಿಸಿದ್ದ ಮಸೂದೆ ಕುರಿತು ರಾಜ್ಯಪಾಲರು ಎತ್ತಿದ್ದ ಪ್ರಶ್ನೆಗಳಿಗೆ ವಿವರವಾದ ಸ್ಪಷ್ಟಿಕರಣ ಕೊಟ್ಟಿರುವ ಸರ್ಕಾರ, ಅಂಕಿತಕ್ಕಾಗಿ ಮತ್ತೆ ಮಸೂದೆಯನ್ನು ಲೋಕಭವನಕ್ಕೆ ಕಳುಹಿಸಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಲು ಹೊರಡಿಸಿದ್ದ ಆದೇಶಕ್ಕೆ ಕಾನೂನು ಬಲ ನೀಡುವ ಉದ್ದೇಶದಿಂದ 'ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ- 2025' ಅನ್ನು ಸರ್ಕಾರ ರೂಪಿಸಿತ್ತು. ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿಅನುಮೋದನೆಗೊಂಡಿದ್ದ ಈ ಮಸೂದೆಯನ್ನು ಅಂಕಿತಕ್ಕಾಗಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಕಳುಹಿಸಲಾಗಿತ್ತು. ಆದರೆ, ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.
'ಅಡ್ವಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ ಅವರು 14 ಪುಟಗಳ ಸ್ಪಷ್ಟನೆಯನ್ನು ಸಿದ್ಧಪಡಿಸಿದ್ದು, ಅದನ್ನು ಮಸೂದೆಯ ಜೊತೆಗೆ ರಾಜ್ಯಪಾಲರಿಗೆ ಕಳುಹಿಸಲಾಗಿದೆ' ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಎಜಿ ವಿವರಣೆಯಲ್ಲಿ ಏನಿದೆ?
'ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಹೆಚ್ಚಿಸಲು ಸಂಸತ್ತಿನ ಅನುಮೋದನೆಯ ಅಗತ್ಯದ ಬಗ್ಗೆ ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದರು. ಅಸ್ತಿತ್ವದಲ್ಲಿರುವ ಮೀಸಲಾತಿ ಚೌಕಟ್ಟಿನೊಳಗೆ ಮಸೂದೆ ರೂಪಿಸಲಾಗಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ರೂಪಿಸಿದ್ದ 'ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ -2022'ಕ್ಕೆ ರಾಷ್ಟ್ರಪತಿ, ಸಂಸತ್ತಿನ ಒಪ್ಪಿಗೆ ಅಥವಾ ರಾಷ್ಟ್ರಪತಿಯ ಯಾವುದೇ ಆಕ್ಷೇಪಣೆ ಇಲ್ಲದೆ ರಾಜ್ಯಪಾಲರೇ ಅಂಕಿತ ಹಾಕಿದ್ದಾರೆ. ಈ ಕಾಯ್ದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ, ಕಾಯ್ದೆಯು ಸಂವಿಧಾನಬಾಹಿರವೆಂದು ಹೈಕೋರ್ಟ್ ರದ್ದುಪಡಿಸಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿಗೆ ಶೇ 17 ಮೀಸಲಾತಿ ನೀಡಲಾಗುತ್ತಿದ್ದು, ಈ ಜಾತಿಗಳಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಮೀಸಲಾತಿಯನ್ನು ಸರ್ಕಾರವು ಮರು ವರ್ಗೀಕರಣ ಮಾಡಿದೆ. ಇದಕ್ಕೆವಿಧಾನ ಮಂಡಲವೂ ಅನುಮೋದನೆ ನೀಡಿದೆ' ಎಂದು ಎಜಿ ವಿವರಿಸಿದ್ದಾರೆ.





Comments