top of page

ಲೋಕಸಭಾ ಸ್ಪೀಕ‌ರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ವಿರೋಧ ಪಕ್ಷಗಳು

  • Writer: new waves technology
    new waves technology
  • Feb 9
  • 1 min read

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಇಂದು (ಸೋಮವಾರ) ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ಗೊತ್ತುವಳಿ ಮಂಡಿಸಲು ವಿರೋಧ ಪಕ್ಷಗಳು ಮುಂದಾಗಿವೆ ಎಂದು ವರದಿಯಾಗಿದೆ.

ಸಂವಿಧಾನದ ವಿಧಿ 94-ಸಿ ಅಡಿಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗುತ್ತಿದೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡದಿರುವುದು, ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಕಾಂಗ್ರೆಸ್‌ನ ಮಹಿಳಾ ಸಂಸದರ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಿರುವುದು ಮತ್ತು 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ನೋಟಿಸ್‌ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಲೋಕಸಭೆಯಲ್ಲಿ ಶೀಘ್ರದಲ್ಲೇ ನಿರ್ಣಯ ಮಂಡಿಸಲಾಗುವುದು ಮತ್ತು ಸಂಸದರ ಸಹಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ನಿರ್ಣಯಕ್ಕೆ ಲೋಕಸಭೆಯಲ್ಲಿ 100 ಸಂಸದರು ಸಹಿ ಹಾಕುವ ಸಾಧ್ಯತೆಯಿದ್ದು, ವಿವಿಧ ವಿರೋಧ ಪಕ್ಷಗಳ ಸಂಸದರ ಸಹಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇಂದು ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇಂದು ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಗೊತ್ತುವಳಿ ಮಂಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಡಪಕ್ಷಗಳಾದ, ಡಿಎಂಕೆ, ಎಸ್‌ಪಿ, ಆರ್‌ಜೆಡಿ, ಶಿವಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಮತ್ತು ಆರ್‌ಎಸ್‌ಪಿ ಸೇರಿದಂತೆ ಇತರ ಪಕ್ಷಗಳ ಜೊತೆಗೆ ಟಿಎಂಸಿ ಕೂಡ ಸಭೆಯಲ್ಲಿ ಭಾಗವಹಿಸಿತ್ತು.

Comments


bottom of page