top of page

ವಿಧಾನಸಭೆ: ವಿಬಿ ಜಿ ರಾಮ್ ಜಿ ವಿರೋಧಿಸಿನಿರ್ಣಯ

  • Writer: new waves technology
    new waves technology
  • 20 hours ago
  • 1 min read

ಬೆಂಗಳೂರು: ವಿರೋಧಪಕ್ಷಗಳ ಆಕ್ಷೇಪ ಮತ್ತು ಗದ್ದಲದ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಬಿ ಜಿ ರಾಮ್ ಜಿ' ಕಾಯ್ದೆ ರದ್ದುಪಡಿಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ನಿರ್ಣಯದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, 'ಇದು ಸದನದ ನಿರ್ಣಯವಾಗಲು ಸಾಧ್ಯವಿಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಣಯ ಎಂದು ಬೇಕಾದರೆ ಮಂಡಿಸಿ ನಮ್ಮ ತಕರಾರಿಲ್ಲ' ಎಂದರು.

ಆಕ್ಷೇಪಕ್ಕೆ ಜಗ್ಗದ ಮುಖ್ಯಮಂತ್ರಿ ನಿರ್ಣಯವನ್ನು ಓದಿದರು. ಈ ವೇಳೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದರು.

ನಿರ್ಣಯದ ಸಾರಾಂಶ: ಗ್ರಾಮೀಣ ಬಡವರ ಪಾಲಿನ 'ಸಂಜೀವಿನಿ'ಯಾಗಿದ್ದ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (ನರೇಗಾ) ರದ್ದುಗೊಳಿಸಿರುವುದನ್ನು ಈ ಸದನವು ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ 'ವಿಬಿ ಜಿ ರಾಮ್ ಜಿ' (ವಿಬಿ-ಜಿ ರಾಮ್-ಜಿ) ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ.

ಯುಪಿಎ ಸರ್ಕಾರ ನರೇಗಾ ಜಾರಿ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿರ್ಮೂಲನೆ, ವಲಸೆ ತಡೆ, ಲಿಂಗ ತಾರತಮ್ಯವಿಲ್ಲದೆ ವೇತನ ನೀಡುವಿಕೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆಯಿಂದ ಕ್ರಾಂತಿಕಾರಿ ಬದಲಾವಣೆ ತಂದಿದೆ.

ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತ್‌ಗಳಿಗೆ ನೀಡಲಾದ ಅಧಿಕಾರ ಮತ್ತು ಸ್ವಾಯತ್ತೆಯನ್ನು ಕಸಿದುಕೊಳ್ಳುತ್ತದೆ. ಗಾಂಧಿಯವರ ಗ್ರಾಮ ಸ್ವರಾಜ್ಯದ ಉದ್ದೇಶವನ್ನು ವಿಫಲಗೊಳಿಸುತ್ತದೆ.

ದೆಹಲಿಯ ದಂತ ಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ, ಗ್ರಾಮ ಸಭೆಗಳ ಅಧಿಕಾರ ಕಿತ್ತುಕೊಳ್ಳಲಾಗಿದೆ.

Comments


bottom of page