top of page

ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ: ಲೋಕಸಭೆಯಲ್ಲಿ ಕೋಲಾಹಲ

  • Writer: new waves technology
    new waves technology
  • 24 hours ago
  • 1 min read

ನವದೆಹಲಿ: ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್‌ನಲ್ಲಿ ನಡೆದ ಸೇನಾ ತಿಕ್ಕಾಟದ ಬಗ್ಗೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸೋಮವಾರ ಪ್ರಸ್ತಾಪಿಸಿದ್ದು ಭಾರಿ ಗದ್ದಲ ಎಬ್ಬಿಸಿತು.

ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದು, ಕೋಲಾಹಲಕ್ಕೆ ಕಾರಣವಾಯಿತು. ರಾಹುಲ್ ಅವರು ಅಪ್ರಕಟಿತ ಪುಸ್ತಕದ ಕುರಿತು ಪ್ರಸ್ತಾಪಿಸಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಆರೋಪಿಸಿದರು.

ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಲು ಮುಂದಾದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ನನಗೂ ಮುನ್ನ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್‌ನ ದೇಶಭಕ್ತಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತು ಮೊದಲು ಪ್ರತಿಕ್ರಿಯಿಸಲು ಬಯಸುತ್ತೇನೆ' ಎಂದು ಹೇಳಿ, ಜನರಲ್ ನರವಣೆ ಅವರ ಪುಸ್ತಕವನ್ನು ಉಲ್ಲೇಖಿಸಿದರು.

ಸೇನಾ ತಿಕ್ಕಾಟವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನಿಭಾಯಿಸಿದ್ದ ರೀತಿಯ ಬಗ್ಗೆ ಈ ಅಪ್ರಕಟಿತ ಪುಸ್ತಕದಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಗೊತ್ತಾಗಿದೆ.

ರಕ್ಷಣಾ ಸಚಿವರಿಂದ ಆಕ್ಷೇಪ: ಇದಕ್ಕೆ ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ, 'ಅಪ್ರಕಟಿತ ಪುಸ್ತಕ ಮತ್ತು ಅದರ ಸಾರಾಂಶವನ್ನು ಉಲ್ಲೇಖಿಸುವುದು ಸದನದ ನಿಯಮಗಳಿಗೆ ವಿರುದ್ಧವಾಗಿದೆ' ಎಂದರು.

2020ರ ಮೇ 5ರಂದು 'ಪಾಂಗಾಂಗ್' ಸರೋವರ ಪ್ರದೇಶದಲ್ಲಿ ಭಾರತ- ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು.

ಜನರಲ್‌ ನರವಣೆ ಅವರು ತಮ್ಮ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯಲ್ಲಿ (ಅಪ್ರಕಟಿತ) ಈ ಕುರಿತು ಉಲ್ಲೇಖಿಸಿದ್ದಾರೆ. ಈ ಪುಸ್ತಕದ ಕುರಿತ ಒಂದು ಲೇಖನವು ಪ್ರಸಿದ್ದ ನಿಯತಕಾಲಿಕ ದಲ್ಲಿ (ದಿ ಕ್ಯಾರವಾನ್) ಪ್ರಕಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Comments


bottom of page