ಸಂಪಾದಕೀಯ: ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು: ಘನತೆಯ ಬದುಕಿಗೆ ಮಹತ್ವದ ಹೆಜ್ಜೆ
- new waves technology
- Feb 3
- 2 min read

ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಮಹಿಳೆಯ ಘನತೆಯ ಬದುಕಿನತ್ತ ಇರಿಸಲಾದ ಮತ್ತೊಂದು ಹೊಸ ಹೆಜ್ಜೆ. ಸಂವಿಧಾನದ 21ನೇ ವಿಧಿ ಪ್ರಕಾರ ಬದುಕುವ ಹಕ್ಕೆಂಬುದು ಘನತೆಯಿಂದ ಬದುಕುವ ಹಕ್ಕನ್ನೂ ಒಳಗೊಳ್ಳುತ್ತದೆ. 'ಮುಟ್ಟಿನ ನೈರ್ಮಲ್ಯ ಸೌಕರ್ಯ'ಗಳು ಆರೋಗ್ಯದ ವಿಚಾರ ಮಾತ್ರವಲ್ಲ, ಅದೊಂದು ಸಾಂವಿಧಾನಿಕ ಹಕ್ಕು ಎಂದು ಈ ತೀರ್ಪು ಗುರುತಿಸಿದೆ. ಮುಟ್ಟಿನ ನೈರ್ಮಲ್ಯದ ಸೌಕರ್ಯಗಳು ಹೆಣ್ಣುಮಗುವಿನ ಬದುಕು, ಘನತೆ, ಆರೋಗ್ಯ ಹಾಗೂ ಶಿಕ್ಷಣದ ಹಕ್ಕಿನ ಅಂತರ್ಗತ ಭಾಗ ಎಂದೂ ಕೋರ್ಟ್ ಹೇಳಿದೆ. ಹೀಗಾಗಿ, ಎಲ್ಲ ಶಾಲೆಗಳಲ್ಲಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಹಾಗೂ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಸ್ವಚ್ಛ ಶೌಚಾಲಯ ಸೌಲಭ್ಯಗಳನ್ನು ಒದಗಿಸಬೇಕು ಎಂಬಂಥ ನ್ಯಾಯಿಕ ಪರಮಾದೇಶವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡಿದೆ; ಮೂರು ತಿಂಗಳೊಳಗೆ ಆದೇಶ ಪರಿಪಾಲನೆಯ ನಿರ್ದಿಷ್ಟ ಗಡುವನ್ನೂ ನೀಡಿದೆ. ಸಂವಿಧಾನದ 14ನೇ ವಿಧಿಯು ಸಮಾನತೆಯ ಹಕ್ಕನ್ನು ನೀಡುತ್ತದೆ. ಆದರೆ ಎಲ್ಲರನ್ನೂ ಒಂದೇ ಬಗೆಯಲ್ಲಿ ಸಮಾನವಾಗಿ ಕಾಣುವಂತಹದ್ದೂ ಅಸಮಾನತೆಯನ್ನು ಶಾಶ್ವತವಾಗಿಸಬಹುದು ಎನ್ನುವ ತರ್ಕ, ಕೋರ್ಟ್‌ನ ಈ ಆದೇಶದ ಹಿಂದೆ ಇದೆ. ಹೀಗಾಗಿ ಅಸಮಾನತೆಯ ಮೂಲ ಕಾರಣ, ವಿಭಿನ್ನ ಅಗತ್ಯಗಳು ಹಾಗೂ ನೀಡಬೇಕಾದ ಅಗತ್ಯ ಬೆಂಬಲಗಳನ್ನು ಆಧರಿಸಿ ನ್ಯಾಯಯುತ ಫಲಿತಗಳನ್ನು ಪಡೆಯುವಂತಹ ತರ್ಕದ (ಸಬ್‌ಸ್ಟಾಂಟಿವ್ ಈಕ್ವಾಲಿಟಿ) ಆಧಾರದಲ್ಲಿ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಈ ಬಗೆಯ ಗ್ರಹಿಕೆಯು, ಮಹಿಳೆ ಹಾಗೂ ಪುರುಷರನ್ನು ಒಂದೇ ರೀತಿಯಲ್ಲಿ ಕಾಣಲಾಗದು ಎಂಬುದನ್ನು ಗುರುತಿಸುತ್ತದೆ. ಇಂತಹ ಕ್ರಮಗಳು ರಕ್ಷಣೆ ಅಥವಾ ಅವಲಂಬನೆಯನ್ನಲ್ಲ, ಸ್ವಾಯತ್ತೆಯನ್ನು ಖಾತರಿ ಪಡಿಸುವಂತಹದ್ದಾಗಿರಬೇಕು ಎಂಬುದನ್ನೂ ಪ್ರತಿಪಾದಿಸುತ್ತವೆ.
'ಪೀರಿಯಡ್ (ವಾಕ್ಯದ ಪೂರ್ಣ ವಿರಾಮದ ಚಿಹ್ನೆ), ವಾಕ್ಯದ ಅಂತ್ಯವನ್ನು ಸೂಚಿಸಬೇಕು, ಬಾಲೆಯ ಶಿಕ್ಷಣವನ್ನಲ್ಲ ಎನ್ನುವ, ಅಮೆರಿಕನ್ ಶಿಕ್ಷಣ ತಜ್ಞೆ ಮೆಲಿಸ್ಸಾ ಬರ್ಟನ್ ಅವರ ಮಾತುಗಳನ್ನು 127 ಪುಟಗಳ ತೀರ್ಪಿನ ಬರಹದ ಆರಂಭದಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಮುಟ್ಟಿನ ನೈರ್ಮಲ್ಯ ಪರಿಕರಗಳು ಅಥವಾ ಶೌಚಾಲಯದ ಕೊರತೆಯಿಂದಾಗಿ ಬಾಲಕಿಯೊಬ್ಬಳು ತರಗತಿಗಳಿಗೆ ಹಾಜರಾಗುವುದು ಸಾಧ್ಯ ಆಗದಿದ್ದಲ್ಲಿ, ಆಗ ಆಕೆ ತನ್ನ ಸಹಪಾಠಿಗಳಾದ ಹುಡುಗರ ಜೊತೆ ಸಮಾನ ಹೆಜ್ಜೆ ಇರಿಸಲು ಅಸಾಧ್ಯವಾಗುತ್ತದೆ. ಮುಟ್ಟಿನ ನೈರ್ಮಲ್ಯ ಸೌಕರ್ಯ ಸಮಸ್ಯೆಗಳಿಂದಾಗಿಯೇ ದೇಶದಲ್ಲಿ ಸುಮಾರು 2.3 ಕೋಟಿ ಹರೆಯದ ಹೆಣ್ಣುಮಕ್ಕಳು ಅರ್ಧದಲ್ಲೇ ಶಾಲೆ ಬಿಡುತ್ತಾರೆಂಬುದು ಈಗಲೂ ನಮ್ಮ ಸಮಾಜ ಎದುರಿಸುತ್ತಿರುವಂತಹ ಕಟು ವಾಸ್ತವ. ಇಂತಹ ಸಂದರ್ಭದಲ್ಲಿ, ಮುಟ್ಟಿನ ನೈರ್ಮಲ್ಯ ನಿರ್ವಹಣೆ ವ್ಯವಸ್ಥೆಗಳಿಲ್ಲದೆ ಅರ್ಧಕ್ಕೇ ಶಾಲೆ ಬಿಡುವಂತಾಗುವುದು ಅಥವಾ ತರಗತಿಗಳಿಗೆ ಗೈರುಹಾಜರಾಗುವಂತಹದ್ದು ಆಕೆಯ ದೇಹದ ಸ್ವಾಯತ್ತೆ ಹಾಗೂ ಖಾಸಗೀತನವನ್ನು ಉಲ್ಲಂಘಿಸಿದಂತೆ ಎಂದು ಕೋರ್ಟ್ ಪರಿಗಣಿಸಿರುವುದು ಮಹತ್ವದ್ದು. 2009ರ 'ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಮುಟ್ಟಿನ ಆರೋಗ್ಯದ ನೆಲೆಯಲ್ಲಿ ವ್ಯಾಖ್ಯಾನಿಸಿರುವುದು ಹೆಣ್ಣುಮಗುವಿನ ಅಗತ್ಯಗಳಿಗೆ ಸಂವೇದನಾಶೀಲವಾದಂತಹ ಸ್ಪಂದನವಾಗಿದೆ. 'ಉಚಿತ ಶಿಕ್ಷಣ ಟ್ಯೂಷನ್ ಶುಲ್ಕ ರದ್ದತಿಗೆ ಸೀಮಿತವಲ್ಲ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲಿನ ವೆಚ್ಚದಿಂದಾಗಿ ಹೆಣ್ಣುಮಕ್ಕಳು ಶಾಲೆ ಬಿಡುವಂತಾದರೆ ಅಥವಾ ತರಗತಿಗಳಿಗೆ ಗೈರುಹಾಜರಾಗುವಂತಾದರೆ ಆಗ ಶಿಕ್ಷಣದ ಹಕ್ಕು ಹೆಣ್ಣುಮಗುವಿಗೆ ಷರತ್ತುಬದ್ಧವಾಗಿಬಿಡುತ್ತದೆ. ಹೀಗಾಗಿ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದೂ ಶಾಸನಬದ್ಧ ಬಾಧ್ಯಸ್ಥಿಕೆಯಾಗುತ್ತದೆ ಎಂದು ಕೋರ್ಟ್ ವಿಶ್ಲೇಷಿಸಿರುವುದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ.





Comments