Indian Stock Market ಭರ್ಜರಿ ವಹಿವಾಟು; Sensex ಭಾರಿ ಏರಿಕೆ, 24,700 ಅಂಕ ವಾಪಸ್ ಪಡೆದ Nifty
- new waves technology
- Dec 5, 2024
- 1 min read
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.98 ರಿಂದ ಶೇ.1.00ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 809.53 ಅಂಕಗಳ ಏರಿಕೆಯೊಂದಿಗೆ 81,765.86 ಅಂಕಗಳಿಗೆ ಏರಿಕೆಯಾಗಿದೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ 5ನೇ ದಿನವೂ ಸಕಾರಾತ್ಮಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.98 ರಿಂದ ಶೇ.1.00ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 809.53 ಅಂಕಗಳ ಏರಿಕೆಯೊಂದಿಗೆ 81,765.86 ಅಂಕಗಳಿಗೆ ಏರಿಕೆಯಾಗಿದೆ.
ಅಂತೆಯೇ ನಿಫ್ಟಿ ಕೂಡ 240.95 ಅಂಕಗಳ ಅಲ್ಪ ಏರಿಕೆಯೊಂದಿಗೆ 24,708.40 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ನಿಫ್ಟಿ ತನ್ನ ಹಿಂದಿನ ಗರಿಷ್ಠ ವಹಿವಾಟು ಮಟ್ಟಕ್ಕೆ ತಲುಪಿದ್ದು, ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ.
ಮಾರುಕಟ್ಟೆ ಮೇಲೆ ಆರ್ ಬಿಐ ಪಾತ್ರ
ಇದೇ ವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಗಳ ಪರಿಷ್ಕರಣೆ ಕುರಿತು ಸಭೆ ಸೇರುತ್ತಿದ್ದು, ಹೀಗಾಗಿ ಇದೀಗ ಎಲ್ಲ ಹೂಡಿಕೆದಾರರ ಚಿತ್ತ ಆರ್ ಬಿಐ ಮೇಲೆ ನೆಟ್ಟಿದೆ. ಹಾಲಿ ಮಾರುಕಟ್ಟೆ ಪರಿಸ್ಥಿತಿಗಳ ಅವಲೋಕನದ ಮೇರೆಗೆ ಆರ್ ಬಿಐ ಪ್ರಸ್ತುತ ಬಡ್ಡಿದರ ಪರಿಷ್ಕರಣೆಗೆ ಮುಂದಾಗುವುದಿಲ್ಲ ಎಂದು ಹೇಳಲಾಗಿದೆ.
ಅದಾಗ್ಯೂ ಇತರೆ ನೀತಿಗಳ ಕುರಿತು ಆರ್ ಬಿಐ ಕೈಗೊಳ್ಳಬಹುದಾದ ನಿರ್ಣಯಗಳ ಕುರಿತು ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ. ಆರ್‌ಬಿಐನ ಹಣಕಾಸು ನೀತಿಯ ನಿರೀಕ್ಷೆಯಲ್ಲಿ ಭಾರತೀಯ ಮಾರುಕಟ್ಟೆ ಕಳೆದೆರಡು ದಿನಗಳಿಂದ ಧನಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದು, ಇದಕ್ಕೆ ಎಫ್‌ಐಐಗಳ ಚೇತೋಹಾರಿ ವಹಿವಾಟು ಕೂಡ ಕಾರಣ ಎಂದು ಹೇಳಲಾಗಿದೆ.
ಇದಲ್ಲದೆ, ಹಣದುಬ್ಬರದ ಏರಿಕೆಯ ಹೊರತಾಗಿಯೂ ನವೆಂಬರ್ ನಲ್ಲಿ ಸೇವಾ PMI ಡೇಟಾದಲ್ಲಿನ ಸ್ಥಿರತೆ ಇದ್ದು, ಇದು ದೇಶದಲ್ಲಿನ ವ್ಯಾಪಾರ ಚಟುವಟಿಕೆಯಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ಇದೂ ಕೂಡ ಷೇರುಮಾರುಕಟ್ಟೆ ಸ್ಥಿರ ವಹಿವಾಟಿಗೆ ಕಾರಣ ಎಂದು ಹೇಳಲಾಗಿದೆ.
ಇನ್ನು ಇಂದಿನ ವಹಿವಾಟಿನಲ್ಲಿ ಐಟಿ ವಲಯದ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪ್ರಮುಖವಾಗಿ ಟ್ರೆಂಟ್, ಇನ್ಫೋಸಿಸ್ ಮತ್ತು ಟಿಸಿಎಸ್ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ 27 ಸಂಸ್ಥೆಗಳು ಲಾಭಾಂಶ ಕಂಡಿದ್ದು, 3 ಸಂಸ್ಥೆಗಳು ಮಾತ್ರ ನಷ್ಟ ಅನುಭವಿಸಿವೆ. ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಷೇರುಗಳು ಹೆಚ್ಚಿನ ಲಾಭಾಂಶ ಗಳಿಸಿದರೆ, ಎನ್ ಟಿಪಿಸಿ, ಏಷ್ಯನ್ ಪೇಂಟ್ಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.
Comments