top of page

ಅನಾರೋಗ್ಯ ಪೀಡಿತ ತಾಯಿಯನ್ನು ಮನೆಯಲ್ಲಿ ಲಾಕ್ ಮಾಡಿ ಕುಂಭಮೇಳಕ್ಕೆ ಹೋದ ಮಗ!

  • Writer: new waves technology
    new waves technology
  • Feb 20
  • 1 min read

ಮಹಿಳೆಯ ಮಗ ಅಖಿಲೇಶ್ ಪ್ರಜಾಪತಿ ತನ್ನ ತಾಯಿಯನ್ನು ಮನೆಯೊಳಗೆ ಲಾಕ್ ಮಾಡಿ, ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರಯಾಗ್​ರಾಜ್​ಗೆ ತೆರಳಿದ್ದರು.

ree

ರಾಂಚಿ: ವ್ಯಕ್ತಿಯೊಬ್ಬ 68 ವರ್ಷದ ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋದ ಆಘಾತಕಾರಿ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ರಾಮಗಢದ ಸಿಸಿಎಲ್ ಕ್ವಾರ್ಟರ್ಸ್‌ನ ಮನೆಯೊಂದರಲ್ಲಿ ಬಂಧಿಯಾಗಿದ್ದ ವೃದ್ಧ ಮಹಿಳೆ ನಾಲ್ಕು ದಿನಗಳ ನಂತರ, ಬುಧವಾರ ಸಹಾಯಕ್ಕಾಗಿ ಕೂಗಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮಹಿಳೆಯ ಮಗ ಅಖಿಲೇಶ್ ಪ್ರಜಾಪತಿ ತನ್ನ ತಾಯಿಯನ್ನು ಮನೆಯೊಳಗೆ ಲಾಕ್ ಮಾಡಿ, ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರಯಾಗ್​ರಾಜ್​ಗೆ ತೆರಳಿದ್ದರು.


ಮನೆಯ ಗೇಟ್ ಓಪನ್ ಮಾಡುತ್ತಿರುವ ಸ್ಥಳೀಯರು

"ಒಳಗಿನಿಂದ ಯಾರೋ ಗೇಟ್ ಬಡಿಯುತ್ತಿರುವುದನ್ನು ನಾನು ಕೇಳಿದೆ ಮತ್ತು ನಾನು ಗೇಟ್‌ನ ರಂಧ್ರದ ಮೂಲಕ ಇಣುಕಿ ನೋಡಿದಾಗ ಸಂಜು ದೇವಿ ಒಳಗೆ ಸಹಾಯಕ್ಕಾಗಿ ಅಳುತ್ತಿರುವುದು ಕಂಡುಬಂತು" ಎಂದು ಹೆಸರು ಹೇಳಲು ಬಯಸದ ನೆರೆಹೊರೆಯವರು ಹೇಳಿದ್ದಾರೆ.

ಅವರು ತಕ್ಷಣ ಇತರರಿಗೆ ಮಾಹಿತಿ ನೀಡಿದರು ಮತ್ತು ಅವರು ಬೀಗ ಒಡೆದು ವೃದ್ಧ ಮಹಿಳೆಯನ್ನು ರಕ್ಷಿಸಿದರು. ಮೂರು ದಿನಗಳ ಕಾಲ ಆ ವೃದ್ಧೆ ಅನ್ನ, ನೀರಿಲ್ಲದೆ ಸಂಕಟಪಟ್ಟಿದ್ದಾರೆ. ಹಸಿವು ಮತ್ತು ದೌರ್ಬಲ್ಯದಿಂದ ಬಳಲುತ್ತಿದ್ದಾರೆ ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.

ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯ ಏಕೈಕ ಪುತ್ರ ಅಖಿಲೇಶ್ ಪ್ರಜಾಪತಿ ಅವರು, ತನ್ನ ಪತ್ನಿ ಸೋನಿ ಮತ್ತು ಮಕ್ಕಳೊಂದಿಗೆ ಕುಂಭದಲ್ಲಿ ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುವ ಮೊದಲು ತನ್ನ ತಾಯಿಯನ್ನು ಮನೆಯೊಳಗೆ ಲಾಕ್ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಂಜಿತ್ ಪಾಸ್ವಾನ್ ಅವರು ತಿಳಿಸಿದ್ದಾರೆ.

"ಸಂಜು ದೇವಿಯ ಸ್ಥಿತಿಯನ್ನು ನೋಡಿ ನಮಗೆ ಗಾಬರಿಯಾಯಿತು" ಎಂದು ರಂಜಿತ್ ಪಾಸ್ವಾನ್ ಹೇಳಿದ್ದಾರೆ.

"ವೃದ್ಧ ಅತ್ಯಂತ ದುರ್ಬಲವಾಗಿದ್ದಳು, ತುಂಬಾ ಹಸಿದಿದ್ದಳು ಮತ್ತು ಅವಳ ಬಲಗಾಲು ಮತ್ತು ಕೈಯಲ್ಲಿ ಗಂಭೀರ ಗಾಯಗಳಾಗಿದ್ದವು. ಅವಳ ಸ್ವಂತ ಮಗನೇ ಹೀಗೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು" ಕಿಡಿ ಕಾರಿದ್ದಾರೆ.

ನಂತರ, ತನ್ನ ಮಾವನೊಂದಿಗೆ ಸ್ಥಳಕ್ಕೆ ಆಗಮಿಸಿದ ಸಂಜು ದೇವಿಯ ಮಗಳು ಚಾಂದನಿ ಕುಮಾರಿ ಕೂಡ ಆಘಾತ ಮತ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

"ನನ್ನ ಸಹೋದರ ಯಾವಾಗಲೂ ಸ್ವಾರ್ಥಿ, ಆದರೆ ಅವನು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದು ಚಾಂದನಿ ಕುಮಾರಿ ಹೇಳಿದ್ದಾರೆ. ಅಲ್ಲದೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments


bottom of page